ನವ ದೆಹಲಿ: ಭಾರತಕ್ಕೆ ಪ್ರವಾಸ ಬಂದಿರುವ ಆಸ್ಟ್ರೇಲಿಯಾ ತಂಡ ಬಾರ್ಡರ್- ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ (INDvsAUS) 2-0 ಹಿನ್ನಡೆಯಲ್ಲಿದೆ. ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು ಗೆದ್ದ ಮಾತ್ರ ಮರ್ಯಾದೆ ಉಳಿಯುತ್ತದೆ. ಒಂದು ಪಂದ್ಯ ಡ್ರಾಗೊಂಡರೂ ಸರಣಿಯಲ್ಲಿ ಸೋತಂತೆ. ಪ್ರವಾಸಿ ತಂಡ ಇಷ್ಟೊಂದು ಹೀನಾಯ ಸ್ಥಿತಿಗೆ ಹೋಗಲು ಆ ತಂಡದ ಬ್ಯಾಟರ್ಗಳ ಸ್ಪಿನ್ ಪೋಬಿಯಾವೇ ಕಾರಣ. ಭಾರತದ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಅವರ ರವಿಚಂದ್ರನ್ ಅಶ್ವಿನ್ ಅವರ ನೈಪುಣ್ಯಕ್ಕೆ ಪ್ರವಾಸಿ ತಂಡದ ಆಟಗಾರರು ತಲೆದೂಗಿದರೇ ಹೊರತು ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಎರಡೂ ಪಂದ್ಯಗಳು ಮೂರು ದಿನಗಳ ಒಳಗೆ ಮುಕ್ತಾಯ ಕಂಡವು. ಇಷ್ಟೆಲ್ಲ ಆದ ಮೇಲೆ ಆಸ್ಟ್ರೇಲಿಯಾ ಹಿರಿಯ ಆಟಗಾರರು ಪಾಠ ಕಲಿತಿದ್ದು, ಅಭ್ಯಾಸ ಪಂದ್ಯವನ್ನೇ ಆಡದ ಪ್ಯಾಟ್ ಕಮಿನ್ಸ್ ಬಳಗವ ವಿರುದ್ಧ ಕಿಡಿ ಕಾರಿದ್ದಾರೆ.
ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದಿದ್ದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಬೆಂಗಳೂರಿನ ಆಲೂರಿನಲ್ಲಿ ಕೇವಲ ಸ್ಪಿನ್ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಅವರ ಅಭ್ಯಾಸ ನೆಟ್ಗೆ ಮಾತ್ರ ಸೀಮಿತಗೊಂಡಿತ್ತು. ಆ ವೇಳೆ ನಮಗೆ ಅಭ್ಯಾಸ ಪಂದ್ಯದ ಅಗತ್ಯವೇ ಇಲ್ಲ ಎಂಬುದಾಗಿ ಅಹಂ ವ್ಯಕ್ತಪಡಿಸಿದ್ದರು. ಸ್ಟೀವ್ ಸ್ಮಿತ್ ಒಂದು ಹೆಜ್ಜೆ ಹೆಚ್ಚೇ ಎಂಬಂತೆ, ಭಾರತದಲ್ಲಿ ಅಭ್ಯಾಸಕ್ಕೆ ಕೊಡುವ ಪಿಚ್ ಬೇರೆ ಪಂದ್ಯವಾಡಿಸುವ ಪಿಚ್ ಬೇರೆ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ, ಒಂದೇ ಒಂದು ಅಭ್ಯಾಸ ಪಂದ್ಯದಲ್ಲಿ ಆಡದ ಆಸ್ಟ್ರೇಲಿಯಾ ತಂಡದ ಬಂಡವಾಳ ಬಯಲಾಗುತ್ತಿದೆ. ಆ ತಂಡ ಸ್ಪಿನ್ ಬೌಲಿಂಗ್ ದಾಳಿಗೆ ಪತರಗುಟ್ಟುತ್ತಿದೆ.
ಇದೇ ವಿಚಾರವನ್ನು ಹಿಡಿದುಕೊಂಡು ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ಇಯಾನ್ ಹೀಲಿ ಆಸ್ಟ್ರೇಲಿಯಾ ನಿರ್ಧಾರವನ್ನು ಖಂಡಿಸಿದ್ದಾರೆ. ಇನ್ನೆಂದು ಪ್ರವಾಸ ಹೋದಾಗ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಬಾರದು. ಟೆಸ್ಟ್ ಕ್ರಿಕೆಟ್ನ ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗಗಳು ಇಲ್ಲ. ಅಲ್ಲಿನ ಹವಾಗುಣಕ್ಕೆ ತಕ್ಕಂತೆ ಆಡುವುದೇ ಸೂಕ್ತ ಎಂದು ಹೇಳಿದ್ದಾರೆ.
ಇದನ್ನೂ ಓದಿ : INDvsAUS : ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಬರೆ, ಮತ್ತೊಬ್ಬ ವೇಗಿ ಟೂರ್ನಿಯಿಂದ ಔಟ್
ಎದುರಾಳಿ ತಂಡ ಪ್ರತಿ ಬಾರಿಯೂ ಒತ್ತಡ ಹೇರಲು ಯತ್ನಿಸುತ್ತದೆ. ಅಂಥದ್ದರಲ್ಲಿ ಪ್ಯಾಟ್ ಕಮಿನ್ಸ್ ಬಳಗವು ಭಾರತ ತಂಡದ ಪ್ರತಿರೋಧವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಸ್ಪಿನ್ ಬೌಲಿಂಗ್ಗೆ ಉತ್ತರ ಕೊಡಲು ನಿರುತ್ತರರಾದರು. ಇದುವೇ ಸರಣಿಯಲ್ಲಿ 2-0 ಹಿನ್ನಡೆ ಉಂಟಾಗಲು ಕಾರಣವಾಯಿತು ಎಂದು ಹೀಲಿ ಹೇಳಿದ್ದಾರೆ.