ಹೈದರಾಬಾದ್ : ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆಸೀಸ್ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ವಿಚಿತ್ರ ರೀತಿಯಲ್ಲಿ ರನ್‌ಔಟ್ ಆಗಿದ್ದರು. ಹರ್ಷಲ್ ಪಟೇಲ್ ಬೌಂಡರಿ ಲೈನ್‌ನಿಂದ ಎಸೆದ ಚೆಂಡನ್ನು ಹಿಡಿಯಲು ಹೋದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಕೈ ವಿಕೆಟ್‌ಗೆ ತಾಗಿತ್ತು. ಆದರೆ, ಚೆಂಡು ಮತ್ತೊಂದು ವಿಕೆಟ್ ಉರುಳಿಸಿತ್ತು. ಮೂರನೇ ಅಂಪೈರ್ ಮ್ಯಾಕ್ಸ್‌ವೆಲ್ ಔಟ್ ಎಂದು ಘೋಷಿಸಿದರು. ಈ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ದಿನೇಶ್ ಕಾರ್ತಿಕ್ ಅವರನ್ನು ಬರ ಸೆಳೆದು ಅವರ ಹೆಲ್ಮೆಟ್‌ಗೆ ಮುತ್ತು ಕೊಟ್ಟಿದ್ದರು. ಈ ದೃಶ್ಯ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು.
ಅದಕ್ಕಿಂತ ಹಿಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್ ಹಿಡಿದಿದ್ದರು. ಆ ವೇಳೆ ವಿರಾಟ್ ದಿನೇಶ್ ಕಾರ್ತಿಕ್ ಅವರ ಕತ್ತು ಹಿಡಿದು ಅಭಿಮಾನ ವ್ಯಕ್ತಪಡಿಸಿದ್ದರು. ಈ ಎರಡೂ ದೃಶ್ಯಗಳನ್ನು ವೈರಲ್ ಆಗಿದ್ದವು. ಇದೀಗ ಹೈದರಾಬಾದ್ ಪೊಲೀಸರು ಅವೇ ದೃಶ್ಯಗಳನ್ನು ಬಳಸಿಕೊಂಡು ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹೈದರಾಬಾದ್ ಪೊಲೀಸರು ಹೆಲ್ಮೆಟ್ ಧರಿಸಿದ ಹಾಗೂ ಹೆಲ್ಮೆಟ್ ಧರಿಸದ ದ್ವಿ ಚಕ್ರ ವಾಹನ ಸವಾರರ ಜತೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಪೊಲೀಸರ ಸೃಜನಶೀಲತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಗೊಂಡಿವೆ.
ಇದನ್ನೂ ಓದಿ | Dinesh Karthik | ಮೈ ಸವರಿದ ಅಪರಿಚಿತ ಯುವತಿ, ಪೇಚಿಗೆ ಬಿದ್ದ ದಿನೇಶ್ ಕಾರ್ತಿಕ್