ಮುಂಬಯಿ: ಭಾರತ ತಂಡದ (Team india) ಬೌಲರ್ಗಳು ಗಾಯಗೊಂಡು ಪ್ರಮುಖ ಟೂರ್ನಿಗಳಿಗೆ ಅಲಭ್ಯರಾಗುವುದು ಮಾಮೂಲಿ ಎನಿಸಿದೆ. ಜಸ್‌ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಇದಕ್ಕೆ ಸೂಕ್ತ ಉದಾಹರಣೆ. ಅಂತೆಯೇ ಆಲ್ರೌಂಡರ್ ರವಿಂದ್ರ ಜಡೇಜಾ ಕೂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿಯೇ ಕುಳಿತಿದ್ದಾರೆ. ಹೀಗಾಗಿ ಪ್ರಮುಖ ಟೂರ್ನಿಗಳಿಗೆ ಈ ಮೂವರು ಬೌಲರ್ಗಳು ಅಲಭ್ಯರಾಗಿದ್ದರು. ಬುಮ್ರಾ ಅವರ ಅಲಭ್ಯತೆ ವಿಶ್ವ ಕಪ್ನಲ್ಲಿ ಭಾರತ ತಂಡದ ಪ್ರದರ್ಶನದ ಮೇಲೂ ಪ್ರಭಾವ ಬೀರಿತ್ತು. ಇವರಲ್ಲಿ ಜಸ್‌ಪ್ರಿತ್ ಬುಮ್ರಾ ಸಮಸ್ಯೆಯಿಂದ ಸುಧಾರಿಸಿಕೊಂಡು ಮುಂದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಉಳಿದಿಬ್ಬರ ಪತ್ತೆಯಿಲ್ಲ. ಜಡೇಜಾ ಅವರು ಪತ್ನಿ ರಿವಾಬಾ ಗುಜರಾತ್ ಚುನಾವಣೆಯಲ್ಲಿ ಗೆದ್ದ ಬಳಿಕ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ ಭಾರತ ತಂಡ ಹಿರಿಯ ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ವೃತ್ತಿಪರತೆಯ ಕೊರತೆಯಿಂದಾಗಿ ಅವರೆಲ್ಲರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಜಸ್‌ಪ್ರಿತ್ ಬುಮ್ರಾ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಮುಂದಿನ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅವರು ಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ.
ಜಸ್‌ಪ್ರಿತ್ ಬುಮ್ರಾ ಅವರು ಹೆಚ್ಚು ವೃತ್ತಿಪರತೆಯನ್ನು ತೋರುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಲಭ್ಯರಾಗಲಿದ್ದಾರೆ. ಆದರೆ, ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಹೊರ ಬಂದು ಮುಂದಿನ ಕೆಲಸಕ್ಕೆ ಸಜ್ಜಾಗುವ ಯೋಜನೆ ರೂಪಿಸಿಕೊಂಡಂತಿಲ್ಲ. ಹೀಗಾಗಿ ಆವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಲಭ್ಯರಾಗುವುದು ಅನುಮಾನ, ಎಂಬುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತ ತಂಡಕ್ಕೆ ಪ್ರಮುಖ ಎನಿಸಿಕೊಂಡಿದೆ. ಈ ಸರಣಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲಿದೆ. ಆಸ್ಟ್ರೇಲಿಯಾ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ಸ್ಥಾನಕ್ಕಾಗಿ ಪೈಪೋಟಿಯಿದೆ.
ಇದನ್ನೂ ಓದಿ | Jasprit Bumrah | ವೇಗಿ ಜಸ್‌ಪ್ರಿತ್ ಬುಮ್ರಾ ಚೇತರಿಕೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಲಭ್ಯ?