Site icon Vistara News

Team India | ಆಂಗ್ಲರ ನಾಡಲ್ಲಿ ಅಬ್ಬರಿಸಿದ ಭಾರತದ ವನಿತೆಯರಿಂದ ಎರಡು ದಶಕದ ಬಳಿಕ ನೂತನ ದಾಖಲೆ

Team Inda

ಕ್ಯಾಂಟೆರ್‌ಬರಿ : ಇಂಗ್ಲೆಂಡ್ ಪ್ರವಾಸದಲ್ಲಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತದ ವನಿತೆಯರ ತಂಡದ ವಿಶೇಷ ಸಾಧನೆಯೊಂದು ಮಾಡಿದೆ. ಬುಧವಾರ ನಡೆದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ೮೮ ರನ್‌ಗಳ ವಿಜಯ ಸಾಧಿಸುವ ಮೂಲಕ ಮಹಿಳೆಯರ ತಂಡ ೨೩ ವರ್ಷದ ಬಳಿಕ ಆಂಗ್ಲರ ನಾಡಲ್ಲಿ ಸರಣಿ ಗೆದ್ದ ಹೊಸ ದಾಖಲೆಯನ್ನು ಮಾಡಿದೆ. ಈ ಹಿಂದೆ ಇಂಗ್ಲೆಂಡ್‌ಗೆ ಪ್ರವಾಸ ಹೋಗಿ ಸರಣಿ ಕೊನೇ ಬಾರಿ ಗೆದ್ದಿರುವುದು ೧೯೯೯ರಲ್ಲಿ.

ಎರಡನೇ ಏಕ ದಿನ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ೮೮ ರನ್‌ಗಳ ಭರ್ಜರಿ ಜಯ ದಾಖಲಿಸಿದ್ದರೆ, ಮೊದಲ ಹಣಾಹಣಿಯಲ್ಲಿ ೭ ವಿಕೆಟ್‌ಗಳ ವಿಜಯವನ್ನು ತನ್ನದಾಗಿಸಿಕೊಂಡಿತ್ತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದಿದೆ. ಕೊನೇ ಪಂದ್ಯವನ್ನೂ ಗೆದ್ದರೆ ಕ್ಲೀನ್‌ ಸ್ವೀಪ್‌ ಮಾಡಿದ ಹೊಸ ದಾಖಲೆಯನ್ನು ಮಾಡುವ ಅವಕಾಶ ಪ್ರವಾಸಿ ತಂಡಕ್ಕಿದೆ.

ಇಲ್ಲಿನ ಸೇಂಟ್ ಲಾರೆನ್ಸ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೫೦ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೩೩೩ ರನ್‌ ಬಾರಿಸಿತು. ಗುರಿ ಆತಿಥೇಯ ಬಳಗ ೪೪.೨ ಓವರ್‌ಗಳಲ್ಲಿ ೨೪೫ ರನ್‌ ಬಾರಿಸಿ ಸರ್ವಪತನಗೊಂಡು ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂದ ಶಫಾಲಿ ವರ್ಮ ೮ ರನ್‌ಗಳಿಗೆ ವಿಕೆಟ್ ಒಪ್ಪಿಸಿದ ಕಾರಣ ಆರಂಭಿಕ ಕುಸಿತಕ್ಕೆ ಒಳಗಾಯಿತು. ಆದರೆ, ಹಿಂದಿನ ಪಂದ್ಯದ ಹೀರೊ ಸ್ಮೃತಿ ಮಂಧಾನ ೪೦ ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವೆಲ್ಲರ ನಡುವೆ, ಮಧ್ಯಮ ಕ್ರಮಾಂಕದಲ್ಲಿ ಜೀವನ ಶ್ರೇಷ್ಠ ಬ್ಯಾಟಿಂಗ್ ಮಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ೧೧೧ ಎಸೆತಗಳಿಗೆ ಅಜೇಯ ೧೪೩ ರನ್‌ ಬಾರಿಸಿ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು. ಇವರ ಇನಿಂಗ್ಸ್‌ನಲ್ಲಿ ೪ ಸಿಕ್ಸರ್‌ ಹಾಗೂ ೧೮ ಫೋರ್‌ಗಳೂ ಸೇರಿಕೊಂಡಿದ್ದವು. ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದ ಹರ್ಲಿನ್‌ ದೇವಲ್‌ ೫೮ ರನ್‌ ಬಾರಿಸಿದರು. ಈ ಬ್ಯಾಟರ್‌ಗಳ ಸಾಹಸದಿಂದ ಭಾರತ ತಂಡ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಸವಾಲು ನೀಡಿತು.

ಗರಿಷ್ಠ ರನ್‌ಗಳ ದಾಖಲೆ

೩೩೩ ರನ್‌ ಭಾರತದ ಮಹಿಳೆಯರ ಕ್ರಿಕೆಟ್‌ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತವೂ ಹೌದು. ಐರ್ಲೆಂಡ್‌ ಬಳಗದ ವಿರುದ್ಧ ಈ ಹಿಂದೆ ಬಾರಿಸಿದ್ದ ೨ ವಿಕೆಟ್‌ಗೆ ೩೫೮ ರನ್‌ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ |Smriti Mandhana | ಟಿ20 ಮಾದರಿಯಲ್ಲಿ ಜೀವನಶ್ರೇಷ್ಠ ರ‍್ಯಾಂಕ್‌ ಪಡೆದ ಸ್ಮೃತಿ ಮಂಧಾನಾ

Exit mobile version