ಇಸ್ಲಾಮಾಬಾದ್ : ನಾಸಿಮ್ ಶಾ ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬೌಲರ್. 19 ವರ್ಷದ ಯುವ ವೇಗಿ ಪಾಕಿಸ್ತಾನದ ಎಲ್ಲ ಮಾದರಿಯ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ. 2019ರಲ್ಲಿ ಪಾಕ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಅವರು 14 ಟೆಸ್ಟ್ ಹಾಗೂ 16 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಈ ಯುವ ಬೌಲರ್ ತಮಗೆ ರಾಷ್ಟ್ರೀಯ ತಂಡಕ್ಕೆ ಕರೆ ಬಂದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಈ ವಿಷಯವನ್ನು ಅವರು ಮೂರು ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾಸಿಮ್ ಶಾ ಅವರಿಗೆ 2019ರಲ್ಲಿ ಪಾಕಿಸ್ತಾನ ತಂಡಕ್ಕೆ ಕರೆ ಬಂದಿತ್ತು. ಅದನ್ನವರು ತಮ್ಮ ತಾಯಿಗೆ ಫೋನ್ ಮಾಡಿ ಹೇಳಿದ್ದರು. ಅಲ್ಲದೆ, ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆ ಮಾಡುವಂತೆಯೂ ತಿಳಿಸಿದ್ದರು. ಆದರೆ, ಪದಾರ್ಪಣೆ ಮಾಡುವ ದಿನ ಬೆಳಗೆದ್ದಾಗ ತಾಯಿಯ ನಿಧನದ ಸುದ್ದಿ ಬಂದಿತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
“ನಾನು ಅಮ್ಮನ ಮಗನಾಗಿದ್ದೆ. ಅದರೆ, 2016ರಲ್ಲಿ ಕ್ರಿಕೆಟ್ಗಾಗಿ ಮನೆ ಬಿಡಬೇಕಾಯಿತು. ಲಾಹೋರ್ಗೆ ಹೋಗಿ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿಸಿಕೊಂಡೆ. ಅಂತೆಯೇ 2019ರಲ್ಲಿ ನನಗೆ ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಕರೆ ಬಂತು. ತಕ್ಷಣ ಅಮ್ಮನಿಗೆ ಫೋನ್ ಮಾಡಿ ಖುಷಿಯ ವಿಚಾರ ಹಂಚಿಕೊಂಡೆ. ವಿಷಯ ತಿಳಿದ ಅವರು ಖುಷಿ ಪಟ್ಟಿದ್ದರು. ಕ್ರಿಕೆಟ್ ಬಗ್ಗೆ ಅವರಿಗೆ ಹೆಚ್ಚಿನ ವಿಷಯ ಗೊತ್ತಿಲ್ಲದಿದ್ದರೂ ಪಂದ್ಯದ ದಿನ ಟಿವಿಯಲ್ಲಿ ವೀಕ್ಷಣೆ ಮಾಡುವುದಾಗಿ ಅವರು ಹೇಳಿದ್ದರು. ಆದರೆ, ಇನ್ನೇನು ಪದಾರ್ಪಣೆ ಮಾಡುವ ದಿನ ತಂಡದ ಮ್ಯಾನೇಜರ್ ಫೋನ್ ಮಾಡಿ ತಾಯಿಯ ನಿಧನದ ಸುದ್ದಿಯನ್ನು ಹೇಳಿದರು. ಈ ಮೂಲಕ ನನ್ನ ಕ್ರಿಕೆಟ್ ಪದಾರ್ಪಣೆ ದಿನ ಕರಾಳ ಎನಿಸಿತು,” ಎಂದು ಹೇಳಿದರು.
ಇದನ್ನೂ ಓದಿ | Pakistan Bowler | ನನ್ನ ಇಂಗ್ಲಿಷ್ ಇಲ್ಲಿಗೆ ಮುಗಿಯಿತು, ಇನ್ನು ಕಷ್ಟ ಎಂದ ಪಾಕ್ ಬೌಲರ್ ನಾಸಿಮ್ ಶಾ!