ಕೊಚ್ಚಿ : ಕ್ರೀಡಾ ಪ್ರೇಮಿಗಳು ಸಾಹಸ ಪ್ರೇಮಿಗಳೂ ಆಗಿರುತ್ತಾರೆ ಎಂಬುದು ಬಹುತೇಕ ಸತ್ಯ. ಈ ಮಾತಿಗೆ ಹೊಸ ಉದಾಹರಣೆ ಕೇರಳ ಮೂಲದ ಈ ಮಹಿಳೆ. ಫುಟ್ಬಾಲ್ ಅದರಲ್ಲೂ ಅರ್ಜೆಂಟಿನಾ ತಂಡದ ಅಪ್ಪಟ ಅಭಿಮಾನಿಯಾಗಿರುವ ಅವರು ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್‌ನಲ್ಲಿ (FIFA World Cup ) ಪಾಲ್ಗೊಳ್ಳಲು ಕೇರಳದಿಂದ ಕಾರ್ ಏರಿ ಹೊರಟಿದ್ದಾರೆ. ಡಿಸೆಂಬರ್‌ನಲ್ಲಿ ಅವರು ಕತಾರ್ ತಲುಪಲಿದ್ದು, ಫೈನಲ್ ಪಂದ್ಯ ವೀಕ್ಷಿಸಲಿದ್ದಾರೆ.
ಟ್ರಾವೆಲರ್, ಯೂಟ್ಯೂಬರ್, ವ್ಲೋಗರ್ ಆಗಿರುವ ನಾಜಿ ನೌಶಿ ಫುಟ್ಬಾಲ್ ಪ್ರೇಮಿ ಸಾಹಸಿ ಮಹಿಳೆ. ಅವರು ತಮ್ಮೂರಿನಿಂದ ಮಹೀಂದ್ರಾ ಥಾರ್‌ನಲ್ಲಿ ಹೊರಟಿದ್ದು, ಕತಾರ್ ಸೇರಿಕೊಂಡು ಅಲ್ಲಿ ಫುಟ್ಬಾಲ್‌ನ ರಸದೌತಣ ಸವಿಯಲಿದ್ದಾರೆ. ನೌಶಿಯ ದೀರ್ಘ ಕಾಲದ ಪ್ರವಾಸಕ್ಕೆ ಕೇರಳದ ಸಾರಿಗೆ ಸಚಿವ ಆಂಟನಿ ರಾಜು ಹಸಿರು ನಿಶಾನೆ ತೋರಿದ್ದಾರೆ.
ಕೋಯಮತ್ತೂರು ದಾರಿಯಾಗಿ ಮುಂಬಯಿ ಸೇರಲಿರುವ ಅವರು ಅಲ್ಲಿಂದ ತಮ್ಮ ಥಾರ್ ಜೀಪ್ ಅನ್ನು ಹಡಗಿನ ಮೂಲಕ ಅರಬ್ ದೇಶಕ್ಕೆ ಸಾಗಿಸಲಿದ್ದಾರೆ. ಅಲ್ಲಿ ಬಹ್ರೇನ್, ಕುವೈಟ್, ಸೌದಿ ಅರೇಬಿಯಾ ಮೂಲಕ ಕತಾರ್ ತಲುಪಿದ್ದಾರೆ.
“ಡಿಸೆಂಬರ್ ೧೦ರಂದು ಕತಾರ್ ಪ್ರವೇಶ ಮಾಡುವುದು ನನ್ನ ಯೋಜನೆಯಾಗಿದೆ. ಅಲ್ಲಿ ಫೈನಲ್ ಪಂದ್ಯ ವೀಕ್ಷಣೆ ಮಾಡಲಿದ್ದೇನೆ. ಡಿಸೆಂಬರ್ ೩೧ರ ತನಕ ನಾನು ಅಲ್ಲೇ ಇರಲಿದ್ದೇನೆ. ಅರ್ಜೆಂಟಿನಾ ತಂಡದ ಲಯನೆಲ್ ಮೆಸ್ಸಿಯ ಅಭಿಮಾನಿ ನಾನು. ಅವರೇ ಕಪ್ ಎತ್ತಲಿ ಎಂಬ ನಿರೀಕ್ಷೆಯಲ್ಲಿದ್ದೇನೆ,” ಎಂದು ನೌಶಿ ಹೇಳಿದ್ದಾರೆ.
“ಅವರ ಜೀಪಿನ ತುಂಬಾ ಅಗತ್ಯ ವಸ್ತುಗಳಿವೆ ಹಾಗೂ ಅಡುಗೆ ಸಾಮಗ್ರಿಗಳಿವೆ. ಪೆಟ್ರೋಲ್ ಬಂಕ್‌ಗಳು ಹಾಗೂ ಟೋಲ್ ಪ್ಲಾಜಾಗಳ ಬಳಿ ರಾತ್ರಿ ಸಮಯ ಕಳೆಯಲಿದ್ದೇನೆ,”ಎಂಬುದಾಗಿ ನೌಶಿ ಹೇಳಿದ್ದಾರೆ.
ನನ್ನ ಬಳಿಕ ಒಮನ್ ದೇಶದ ಡ್ರೈವಿಂಗ್ ಲೈಸೆನ್ಸ್ ಇತ್ತು. ಅದನ್ನು ನಾನು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಿಕೊಂಡಿದ್ದೇನೆ ಎಂದು ನೌಶಿ ಹೇಳಿದ್ದಾರೆ.