ಜೊಹಾನ್ಸ್ ಬರ್ಗ್: ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ (AB de Villiers) ಇದೀಗ ಮತ್ತೆ ಕ್ರಿಕೆಟ್ ಕೇತ್ರಕ್ಕೆ ಮರಳಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಅವರು ಆಟಗಾರನ ಬದಲಾಗಿ ಕಾಮೆಂಟ್ರಿ ಮೂಲಕ ಜನರನ್ನು ರಂಜಿಸಲಿದ್ದಾರೆ.
ಜನವರಿ 10 ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಎಸ್‌ಎ 20(ದಕ್ಷಿಣ ಆಫ್ರಿಕಾ ಟಿ20) ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುವ ಕೆಲಸವನ್ನು ನಿರ್ವಹಿಸಲಿದ್ದಾರೆ. ಇವರ ಜತೆಗೆ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಮತ್ತು ಡ್ಯಾರೆನ್ ಗಾಫ್ ಸೇರಿದಂತೆ ಹಲವು ಪ್ರಮುಖರು ಕಾಮೆಂಟರಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಬಾರಿಗೆ ಕಾಮೆಂಟ್ರಿ ಬಾಕ್ಸ್ಗೆ ಪದಾರ್ಪಣೆ ಮಾಡುತ್ತಿರುವ ಕುರಿತು ಮಾತನಾಡಿದ ಎಬಿಡಿ, ಇಷ್ಟು ದಿನ ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಸುದ್ದಿಯಲ್ಲಿದ್ದ ನಾನು ಇದೀಗ ಎಸ್‌ಎ20 ಕ್ರಿಕೆಟ್ ಟೂರ್ನಿಯಲ್ಲಿ ಕಾಮೆಂಟ್ರಿ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ. ಈ ಸಮಯದಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರ ಆಟವನ್ನು ವೀಕ್ಷಿಸಲಿದ್ದೇನೆ. ಅವರ ಆಟವನ್ನು ಆನಂದಿಸುತ್ತಾ ಮೈಕ್‌ನ ಹಿಂದೆ ಕೆಲಸ ಮಾಡಲು ನಾನು ಕಾತರದಿಂದ ಕಾಯುತ್ತಿದ್ದೇನೆ” ಎಂದು ಅವರು ಹೇಳಿದರು.
ಚೊಚ್ಚಲ ಆವೃತ್ತಿ ಬಗ್ಗೆ ಎಬಿ ಡಿವಿಲಿಯರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಸಾಕಷ್ಟು ಅನುಕೂಲವಾಗಲಿದೆ. ಐಪಿಎಲ್ ಭಾರತೀಯ ಕ್ರಿಕೆಟ್ ಮೇಲೆ ಬೀರಿದ ಪ್ರಭಾವವನ್ನು ಎಸ್‌ಎ 20ಯೂ ದಕ್ಷಿಣ ಆಫ್ರಿಕಾ ತಂಡದ ಮೇಲೆ ಬೀರಲಿದೆ ಎಂದು ಹೇಳಿದ್ದಾರೆ. ಹಲವು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ. ವಿಶ್ವದ ಶ್ರೇಷ್ಠ ಆಟಗಾರರ ಜತೆ ಆಡುವ ಅವಕಾಶ ಸಿಗುವುದರಿಂದ ಉತ್ತಮ ಆಟಗಾರರು ರೂಪುಗೊಳ್ಳುತ್ತಾರೆ ಎಂದು ಎಬಿಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | IND VS SL | ಗಾಯಗೊಂಡು ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಸಂಜು ಸ್ಯಾಮ್ಸನ್!