ಮುಂಬಯಿ : ಇಂಡಿಯನ್ ಪ್ರಿಮಿಯರ್ ಲೀಗ್‌ನ ಅತ್ಯಂತ ಜನಪ್ರಿಯ ಕ್ರಿಕೆಟಿಗ ಹಾಗೂ ಆರ್‌ಸಿಬಿ ತಂಡದ ಕಾಯಂ ಸದಸ್ಯರಾಗಿದ್ದ ಎಬಿಡಿ ವಿಲಿಯರ್ಸ್ ಮತ್ತೆ ಭಾರತಕ್ಕೆ ಬರಲಿದ್ದಾರೆ. ಆದರೆ, ಈ ಬಾರಿ ಅವರ ಬರುವುದು ಕ್ರಿಕೆಟ್‌ಗಾಗಿ ಅಲ್ಲ. ಬದಲಾಗಿ ಸಮಾಜ ಸೇವೆಗೆ. ಅವರು ಮೇಕ್ ಎ ಡಿಫರೆನ್ಸ್ (Make A Difference) ಎಂಬ ಎನ್‌ಜಿಒ ಜತೆ ಕೈಜೋಡಿಸಿದ್ದು, ಭಾರತದ ಇಬ್ಬರು ವಿದ್ಯಾರ್ಥಿಗಳ ಜೀವನ ಸುಧಾರಣೆಗಾಗಿ ಟೊಂಕ ಕಟ್ಟಿದ್ದಾರೆ.
ಮಿಸ್ಟರ್ ೩೬೦ ಖ್ಯಾತಿಯ ಎಬಿಡಿ ವಿಲಿಯರ್ಸ್ ಅವರಿಗೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗನಿಗೆ ಭಾರತವೆಂದರೆ ವಿಶೇಷ ಪ್ರೀತಿ. ಭಾರತ ನನ್ನ ಎರಡನೇ ತವರು ಎಂದು ಹಿಂದೊಮ್ಮೆ ವಿಲಿಯರ್ಸ್ ಹೇಳಿಕೊಂಡಿದ್ದರು. ಇದೀಗ ಅವರು ಇಲ್ಲಿನ ಎನ್‌ಜಿಒ ಒಂದರ ಮೂಲಕ ಭಾರತಕ್ಕೆ ಬಂದು ಇಲ್ಲಿನ ಮಕ್ಕಳಿಗಾಗಿ ದುಡಿಯಲು ಮುಂದಾಗಿದ್ದಾರೆ. ಅವರಲ್ಲೊಬ್ಬರು ಬೆಂಗಳೂರು ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿನಿ.
Make A Difference ಎನ್‌ಜಿಒ ಭಾರತದಲ್ಲಿ ಬಡ ಕುಟುಂಬದ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಲು ಶ್ರಮಿಸುತ್ತಿದೆ. ೧೦ರಿಂದ ೨೮ ವರ್ಷದವರ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಒದಗಿಸುತ್ತಿದೆ. ಈ ಯೋಜನೆಯೊಂದಿಗೆ ಕೈ ಜೋಡಿಸಿರುವ ಎಬಿಡಿ ವಿಲಿಯರ್ಸ್ ಅವರು, ಉತ್ತರ ಪ್ರದೇಶದ ಲಖನೌನ ೧೮ ವರ್ಷದ ಅಯಾನ್ ಎಂಬಾತನಿಗೆ ನೆರವು ನೀಡಲಿದ್ದಾರೆ. ಅಯಾನ್ ಶಾಲೆ ಮುಗಿಸಿದ್ದು, ೧೯ ವಯೋಮಿತಿಯ ತಂಡದಲ್ಲಿ ಕ್ರಿಕೆಟ್ ಆಡುವ ಅಭಿಲಾಷೆ ಹೊಂದಿದ್ದಾರೆ. ಅವರಿಗೆ ವಿಲಿಯರ್ಸ್ ನೆರವು ಕಲ್ಪಿಸಲಿದ್ದಾರೆ. ಅಂತೆಯೇ ಬೆಂಗಳೂರಿನ ೨೧ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗೂ ವೃತ್ತಿಯ ಆಯ್ಕೆಗೆ ಎಬಿಡಿ ನೆರವು ನೀಡಲಿದ್ದಾರೆ.
ಭಾರತಕ್ಕೇನಾದರೂ ಕೊಡಬೇಕು
ಭಾರತ ನನಗೆ ಅಪಾರ ಪ್ರೀತಿ ಧಾರೆ ಎರೆದಿದೆ. ಹೀಗಾಗಿ ಅಲ್ಲಿಗೆ ಏನಾದರೂ ಮರಳಿ ಮರಳಿ ಕೊಡಬೇಕು ಎಂಬುದು ನನ್ನ ಅಭಿಲಾಷೆ. ಅದಕ್ಕಾಗಿ ನಾನು ಎಂಎಡಿ ಜತೆ ಕೈಜೋಡಿಸಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ನೆರವು ನೀಡಲಿದ್ದೇನೆ. ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳ ಪ್ರಗತಿಗಾಗಿ ಎನ್‌ಜಿಒ ಶ್ರಮ ವಹಿಸುತ್ತಿದ್ದು, ಆರ್ಥಿಕ ಹಿನ್ನಡೆಯನ್ನು ಮೀರಿ ಮಕ್ಕಳು ಹೆಚ್ಚಿನ ಅವಕಾಶಗಳನ್ನು ಪಡೆಯುವುದು ಉತ್ತಮ ಕಾರ್ಯ,” ಎಂದು ತಮ್ಮ ಕಾರ್ಯದ ಬಗ್ಗೆ ಎಬಿಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | Legends League | ಹಿರಿಯರ ಲೀಗ್‌ನಲ್ಲಿ ಆಡಲಿದ್ದಾರೆ ಭಾರತದ ಮಾಜಿ ಆರಂಭಿಕ ಆಟಗಾರ