Site icon Vistara News

IND vs PAK | ಟೀಮ್‌ ಇಂಡಿಯಾದ ಗೆಳೆಯನಿಗೆ ಶುಭಾಶಯ ಹೇಳಿದ ಎಬಿಡಿ ವಿಲಿಯರ್ಸ್‌

ind vs pak

ದುಬೈ : ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವಿನ ಹಣಾಹಣಿಯಲ್ಲಿ ನಮ್ಮ ದೇಶದ ತಂಡವೇ ಗೆಲ್ಲಲಿ ಎಂದು ಎರಡೂ ದೇಶಗಳ ಕ್ರಿಕೆಟ್‌ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಹಿರಿಯ- ಕಿರಿಯ ಕ್ರಿಕೆಟಿಗರನೇಕರು ತಮ್ಮ ತಮ್ಮ ದೇಶಗಳ ತಂಡದ ಆಟಗಾರರಿಗೆ ಸೋಶಿಯಲ್‌ ಮೀಡಿಯಾಗಳ ಮೂಲಕ ಶುಭಾಶಯ ಕೋರಿದ್ದಾರೆ. ಇವೆಲ್ಲದರ ನಡುವೆ ಭಾರತ ತಂಡ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್‌ ವಿಶೇಷ ಶುಭಾಶಯ ಕೋರಿದ್ದಾರೆ. ಯಾಕೆಂದರೆ, ವಿರಾಟ್‌ ಕೊಹ್ಲಿಗೆ ಇದು ೧೦೦ನೇ ಅಂತಾರಾಷ್ಟ್ರೀಯ ಟಿ೨೦ ಪಂದ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ತಮ ರನ್‌ ಗಳಿಕೆಗೆ ಶುಭಾಶಯ ಕೋರಿದ್ದಾರೆ.

“ನನ್ನ ಆತ್ಮೀಯ ಗೆಳೆಯ ವಿರಾಟ್‌ ಕೊಹ್ಲಿ ಅಪರೂಪದ ಸಾಧನೆ ಮಾಡುತ್ತಿದ್ದಾನೆ. ಇಂದು ೧೦೦ನೇ ಟಿ೨೦ ಪಂದ್ಯವನ್ನಾಡುವ ವಿರಾಟ್‌ ಕೊಹ್ಲಿ ಎಲ್ಲ ಮಾದರಿಯಲ್ಲಿ ೧೦೦ ಪಂದ್ಯಗಳನ್ನು ಆಡಿದ ಸಾಧನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಶುಭಾಶಯ ಹೇಳುತ್ತಿದ್ದೇನೆ. ನಿಮ್ಮ ಬಗ್ಗೆ ನಮಗೆಲ್ಲರಿಗೂ ವಿಶೇಷ ಅಭಿಮಾನವಿದೆ. ನಿಮ್ಮ ಆಟವನ್ನು ನಾವೆಲ್ಲರೂ ವೀಕ್ಷಿಸುತ್ತೇವೆವʼʼ ಎಂದು ವಿಲಿಯರ್ಸ್‌ ವಿಡಿಯೊ ಸಂದೇಶ ಕಳುಹಿಸಿದ್ದಾರೆ. ಅದನ್ನು ಸ್ಟಾರ್ ಸ್ಪೋರ್ಟ್ಸ್‌ ಶೇರ್‌ ಮಾಡಿದೆ.

ವಿರಾಟ್‌ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ ಗೆಳೆಯರು. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರವಾಗಿ ಅಡುವ ವೇಳೆ ಅವರಿಬ್ಬರೂ ಸಾಕಷ್ಟು ಸಮಯ ಜತೆಯಾಗಿ ಕಳೆದಿದ್ದರು. ಹೀಗಾಗಿ ಅವರ ನಡುವೆ ವಿಶೇಷ ಬಾಂಧವ್ಯವಿದೆ. ಅದನ್ನವರು ಆಗಾಗ ಪ್ರಕಟಿಸುತ್ತಿರುತ್ತಾರೆ. ಅಂತೆಯೇ ೧೦೦ನೇ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿ ಅವರಿಗೆ ಎಬಿಡಿ ವಿಲಿಯರ್ಸ್‌ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ | IND vs PAK | ಭಾರತ- ಪಾಕಿಸ್ತಾನ ಪಂದ್ಯದ ಜಾಹೀರಾತು ಬೆಲೆ 10 ಸೆಕೆಂಡ್‌ಗೆ 18 ಲಕ್ಷ ರೂಪಾಯಿ!

Exit mobile version