ಚೆನ್ನೈ : ಕಾರು ರೇಸ್ ವೇಳೆ (Car Race) ಅಪಘಾತ ಸಂಭವಿಸಿ ಭಾರತದ ಜನಪ್ರಿಯ ಕಾರು ರೇಸರ್ ಕೆ. ಇ ಅಶೋಕ್ ಕುಮಾರ್ ಅವರು ಮೃತಪಟ್ಟಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಪರ್ಧೆಯನ್ನು ನಿಲ್ಲಿಸಲಾಗಿದ್ದು, ತನಿಖೆ ನಡೆಸಲು ಆದೇಶ ನಡೆಸಲಾಗಿದೆ. 59 ವರ್ಷದ ಅಶೋಕ್ ಕುಮಾರ್ ಅವರನ್ನು ದುರ್ಘಟನೆ ನಡೆದ ತಕ್ಷಣ ಆಸ್ಪತ್ರೆಗೆ ಸಾಗಿಸಿದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಚೆನ್ನೈ ಮದ್ರಾಸ್ ಇಂಟರ್ನ್ಯಾಷನ್ ಸರ್ಕೀಟ್ನಲ್ಲಿ ಭಾನುವಾರ (ಜನವರಿ 8) ಮುಂಜಾನೆ ನಡೆದ ಘಟನೆಯಲ್ಲಿ ಅವರು ಮೃತಪಟ್ಟಿದ್ದಾರೆ. ಎಮ್ಆರ್ಎಫ್ ಎಮ್ಎಮ್ಎಸ್ಸಿ ಎಫ್ಎಮ್ಎಸ್ಸಿಐ ರೇಸ್ನಲ್ಲಿ ಪಾಲ್ಗೊಂಡಿದ್ದ ಅಶೋಕ್ ಕುಮಾರ್ ಅವರ ಸಲೂನ್ ಕಾರು ಪ್ರತಿಸ್ಪರ್ಧಿಯ ಕಾರಿಗೆ ಡಿಕ್ಕಿ ಹೊಡೆದು ತಡೆಗೋಡೆಗೆ ಹೋಗಿ ಬಡಿದಿತ್ತು.
ಕಾರು ಗುದ್ದಿದ ತಕ್ಷಣ ರೇಸ್ ನಿಲ್ಲಿಸಲಾಯಿತು. (ರೆಡ್ ಫ್ಲ್ಯಾಗ್). ಕಾರಿನೊಳಗೆ ಸಿಲುಕಿಕೊಂಡಿದ್ದ ಅಶೋಕ್ ಕುಮಾರ್ ಅವರನ್ನು ತುರ್ತು ನೆರವು ಸಿಬ್ಬಂದಿ ಹೊರಕ್ಕೆಳೆದು ಆಂಬ್ಯುಲೆನ್ಸ್ ಮೂಲಕ ಸಮೀಪ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆಸ್ಪತ್ರೆಗಳಲ್ಲಿ ವೈದ್ಯರು ನಡೆಸಿದ ಪ್ರಯತ್ನಗಳು ವಿಫಲಗೊಂಡವು.
ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ವಿಕ್ಕಿ ಚಂದೋಕ್ ಅವರು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅಶೋಕ್ ಅವರು ಅನುಭವಿ ರೇಸರ್. ಒಳ್ಳೆಯ ಸ್ನೇಹಿತ ಹಾಗೂ ಅತ್ಯುತ್ತಮ ಸ್ಪರ್ಧಿ ಎಂದು ಹೇಳಿದ್ದಾರೆ. ಅವರ ನಿಧನ ಹಿನ್ನೆಲೆಯಲ್ಲಿ ದಿನ ರೇಸ್ಗಳನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ | Moto GP | 2023ರ ಸೆಪ್ಟೆಂಬರ್ 22ರಿಂದ24ರವರೆಗೆ ಭಾರತದಲ್ಲಿ ಮೊಟೊ ಜಿಪಿ ಬೈಕ್ ರೇಸ್