Site icon Vistara News

Asian Athletics Championships : ಚಿನ್ನ ಗೆದ್ದ ಶಾಟ್​ಪುಟ್​ ಪಟು ತಜಿಂದರ್ ಪಾಲ್ ಸಿಂಗ್

shot putter Tajinderpal Singh Toor

ಬ್ಯಾಂಕಾಕ್​: ಭಾರತದ ಶಾಟ್​​ಪುಟ್ ತಾರೆ ತಜಿಂದರ್ ಪಾಲ್ ಸಿಂಗ್ ತೂರ್ ಅವರು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್ (Asian Athletics Championships)​ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಕಾಂಟಿನೆಂಟಲ್ ಸರ್ಕೀಟ್​ನಲ್ಲಿ ತಮ್ಮ ಪಾರಮ್ಯ ಹೆಚ್ಚಿಸಿಕೊಂಡರು. ಏಷ್ಯಾ ಮಟ್ಟದ ದಾಖಲೆ ಹೊಂದಿರುವ ತೂರ್ ತಮ್ಮ ಎರಡನೇ ಎಸೆತದಲ್ಲಿ ಗುಂಡನ್ನು 20.23 ಮೀಟರ್ ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದುಕೊಂಡರು. ಆದರೆ ಈ ವೇಳೆ ಅವರು ನೋವಿಗೆ ಒಳಗಾಗಿ ಕುಂಟುತ್ತಾ ಹೊರ ನಡೆದರು.

Tajinder Pal Singh Toor

ಇರಾನ್​ನ ಸಬೆರಿ ಮೆಹ್ದಿ (19.98 ಮೀ) ಮತ್ತು ಕಜಕಿಸ್ತಾನದ ಇವಾನ್ ಇವಾನೊವ್ (19.87 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. 28ರ ಹರೆಯದ ತೂರ್ ಏಷ್ಯನ್ ಚಾಂಪಿಯನ್​​ಷಿಪ್​ ಪ್ರಶಸ್ತಿಯನ್ನು ಉಳಿಸಿಕೊಂಡ ಮೂರನೇ ಶಾಟ್​ಪುಟ್​ ತಾರೆ ಎನಿಸಿಕೊಂಡರು. ಕತಾರ್ ನ ಬಿಲಾಲ್ ಸಾದ್ ಮುಬಾರಕ್ 1995 ಮತ್ತು 1998ರಲ್ಲಿ ಹಾಗೂ 2002 ಮತ್ತು 2003ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಜಯಿಸಿದ್ದರು. ಕುವೈತ್​ನ ಮೊಹಮ್ಮದ್ ಘರೀಬ್ ಅಲ್ ಜಿಂಕಾವಿ 1979, 1981 ಮತ್ತು 1983ರಲ್ಲಿ ಸತತವಾಗಿ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ತೂರ್ ಅವರ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ ಆದರೆ ವಿಶ್ವ ಚಾಂಪಿಯನ್​ಷಿಪ್​ (ಆಗಸ್ಟ್ 17ರಿಂದ 27) ಬುಡಾಪೆಸ್ಟ್​ನಲ್ಲಿ ನಡೆಯಲಿದೆ. ಅದಕ್ಕಿನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಹೀಗಾಗಿ ಅವರ ಗಾಯದ ಸಮಸ್ಯೆಯು ಆತಂಕ್ಕೆ ಕಾರಣವಾಗಿದೆ. ಅವರು ತಮ್ಮ ಹೊಸ ಏಷ್ಯನ್ ದಾಖಲೆಯ 21 ಎಸೆತದೊಂದಿಗೆ ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದರು.

ಇದನ್ನೂ ಓದಿ : Team India : ಏಷ್ಯನ್​ ಗೇಮ್ಸ್​ ತಂಡದಲ್ಲಿ ರೋಹಿತ್, ಕೊಹ್ಲಿಇಲ್ಲ; 5 ಪ್ರಮುಖ ಘೋಷಣೆ ಮಾಡಿದ ಬಿಸಿಸಿಐ

2022ರ ವಿಶ್ವ ಚಾಂಪಿಯನ್​ಷಿಪ್​ ಟೂರ್ನಿಯಲ್ಲೂ ತೂರ್​ಗೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅವರಿಗೆ ಆ ವೇಳೆ ತೊಡೆ ಸಂದು ನೋವು ಉಂಟಾಗಿತ್ತು. ಅದೇ ಕಾರಣಕ್ಕೆ ಅವರು ಬರ್ಮಿಂಗ್ಹಮ್​ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ನಷ್ಟ ಮಾಡಿಕೊಂಡಿದ್ದರು. ಟೋಕಿಯೊ ಒಲಿಂಪಿಕ್ಸ್ ಬಳಿಕ ತೂರ್ ತೋಳಿನ ಎಡ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಶುಕ್ರವಾರ ಬ್ಯಾಂಡೇಜ್ ಹಾಕಿದ ಎಡ ಮಣಿಕಟ್ಟಿನೊಂದಿಗೆ ಭಾಗವಹಿಸಿದರು.

Exit mobile version