ಮುಂಬಯಿ: ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ರಾಜಕೀಯ ಇದೆ. ಅಲ್ಲಿ ಅವಕಾಶಗಳನ್ನು ಪಡೆಯಲು ಪ್ರತಿಭೆ ಮಾತ್ರ ಇದ್ದರೆ ಸಾಲದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಅಂಥದ್ದೇ ಮಾತನ್ನು ನಟಿ ಪ್ರಿಯಾಂಕ ಚೋಪ್ರಾ (Priyanka Chopra) ಜೊನಾಸ್ ಹೇಳಿದ್ದಾರೆ. ಅವಕಾಶಗಳು ಇಲ್ಲದ ಕಾರಣಕ್ಕೆ ನಾನು ಹಾಲಿವುಡ್ಗೆ ಹೋಗಿರಲಿಲ್ಲ. ಬದಲಾಗಿ ಇಲ್ಲಿನ ಕೆಟ್ಟ ರಾಜಕೀಯದಿಂದ ಬೇಸತ್ತು ನಿರ್ಗಮಿಸಿದೆ ಎಂದು ಹೇಳಿಕೊಂಡಿದ್ದಾರೆ. ಡಾರ್ಕ್ ಶೆಪರ್ಡ್ ಹಾಗೂ ಮೋನಿಕಾ ಪಾಡ್ಮನ್ ಅವರು ನಿರ್ವಹಿಸುವ ಹಾಸ್ಯ ಕಾರ್ಯಕ್ರಮ ಆರ್ಮ್ಚೆರ್ ಎಕ್ಸ್ಪರ್ಟ್ನಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಎರಡು ದಶಕಗಳ ಕಾಲ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದರು. ಆ ಬಳಿಕ ಏಕಾಏಕಿ ಅವರು ದೇಶ ಬಿಟ್ಟು ಅಮೆರಿಕದಲ್ಲಿ ನೆಲೆಸಿದ್ದರು. ಹಾಲಿವುಡ್ನಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರು. ಅಲ್ಲಿಯೂ ನಟನೆಗೆ ಅವಕಾಶ ಪಡೆದುಕೊಂಡಿದ್ದರು. ಅಲ್ಲಿ ಸಾಧನೆ ಮಾಡಿದ ಬಳಿಕ ಭಾರತಕ್ಕೆ ವಾಪಸಾಗಿ ನೆಲೆಸಿದ್ದಾರೆ. ಜತೆಗೆ ನಿಕ್ ಜೊನಾಸನ್ ಅವರನ್ನು ವಿವಾಹವಾಗಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಅವರು ತಮ್ಮ ಸಿನಿಮಾ ಜರ್ನಿಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಅವರು ಬಾಲಿವುಡ್ ರಾಜಕೀಯದ ಬಗ್ಗೆ ಮಾತನಾಡಿ ಇಲ್ಲಿ ಗೆಲ್ಲುವುದು ಎಲ್ಲರಿಗೂ ಸುಲಭವಲ್ಲ ಎಂಬ ಮಾತನ್ನು ಹೇಳಿದ್ದಾರೆ. ನಾನು ಈ ಮಾತನ್ನು ಮುಕ್ತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಈಗ ನಾನು ಸುರಕ್ಷಿತ ಎಂಬ ಭಾವ ಬಂದಿದೆ. ಹೀಗಾಗಿ ನನಗೆ ಹೇಳುವ ಧೈರ್ಯ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ : Rani Mukerji Birthday: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ನೋಡಲೇಬೇಕಾದ ಸಿನಿಮಾಗಳಿವು
ನಾನು ಒಳ್ಳೆಯ ನಟಿ ಎಲ್ಲ ಎಂಬ ಮಾತುಗಳು ಕೇಳಿ ಬಂದವು. ನನ್ನನ್ನೇ ಮೂಲೆ ಗುಂಪು ಮಾಡಲು ಮುಂದಾಯಿತು. ಇಲ್ಲಿನ ರಾಜಕೀಯದಲ್ಲಿ ಗೆಲುವು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಹೀಗಾಗಿ ಎಲ್ಲದರಿಂದಲೂ ಮುಕ್ತಿ ಪಡೆಯುವ ಉದ್ದೇಶಕ್ಕೆ ಲಾಸ್ ಏಂಜಲೀಸ್ಗೆ ಹೋಗಿ ಅಲ್ಲಿ 2012ರಲ್ಲಿ ಗಾಯಕಿಯಾಗಿ ವೃತ್ತಿ ಆರಂಭಿಸಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.