ಮೆಲ್ಬೋರ್ನ್: ಬೌಲರ್ ಚೆಂಡೆಸೆಯುವ ಮೊದಲೇ ಬ್ಯಾಟರ್ಗಳು ಕ್ರೀಸ್ ಬಿಟ್ಟರೆ ಅವರನ್ನು ರನ್ ಔಟ್ (Nonstrike Run Out) ಮಾಡಬಹುದು ಎಂಬ ಕ್ರಿಕೆಟ್ನ ಹೊಸ ನಿಯಮ ಬೌಲರ್ಗಳ ಪಾಲಿಗೆ ಆಶಾದಾಯಕ. ಹಿಂದೆ ಇದನ್ನು ನ್ಯಾಯಸಮ್ಮತವಲ್ಲ ಎಂದು ಹೇಳುತ್ತಿದ್ದ ಕಾರಣ ಬೌಲರ್ಗಳ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಲಾಗುತ್ತಿತ್ತು. ಆದರೀಗ ಐಸಿಸಿಐ ನಿಯಮದ ಬೆಂಬಲವಿದೆ. ಹಾಗೆಂದು ಸುಖಾಸುಮ್ಮನೆ ಔಟ್ ಮಾಡಲು ಮುಂದಾದರೆ, ಪ್ರೇಕ್ಷಕರ ಎದುರು ಬೌಲರ್ನ ದಡ್ಡತನ ಪ್ರದರ್ಶನವಾಗುವುದು ನಿಶ್ಚಿತ. ಇಂಥದ್ದೇ ಒಂದು ಪ್ರಸಂಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ಬ್ಯಾಶ್ ಲೀಗ್ನಲ್ಲಿ ಘಟಿಸಿದೆ. ಪೇಚಿಗೆ ಸಿಲುಕಿದ್ದು ಆಸ್ಟ್ರೇಲಿಯಾ ತಂಡದ ಸ್ಟಾರ್ ಸ್ಪಿನ್ನರ್ ಆ್ಯಡಂ ಜಂಪಾ.
ಮೆಲ್ಬೋರ್ನ್ ಸ್ಟಾರ್ಸ್ ಮತ್ತು ರೆನೆಗೇಡ್ ನಡುವಿನ ಪಂದ್ಯದ ವೇಳೆ ಈ ಅನಪೇಕ್ಷಿತ ಪ್ರಸಂಗ ನಡೆದಿದೆ. ಮೆಲ್ಬೋರ್ನ್ ತಂಡದ ನಾಯಕ ಆ್ಯಡಂ ಜಂಪಾ ಅವರು ರೆನೆಗೇಡ್ ತಂಡದ ಬ್ಯಾಟರ್ ಟಾಮ್ ರೋಜರ್ ಮೊದಲೇ ಕ್ರೀಸ್ ಬಿಟ್ಟಿದ್ದಾರೆ ಎಂದು ನಾನ್ ಸ್ಟ್ರೈಕ್ ಎಂಡ್ನ ಬೇಲ್ಸ್ ಎಗರಿಸಿದ್ದರು. ರೋಜರ್ ಅವರು ಬೇಸರದಿಂದ ಪೆವಿಲಿಯನ್ ಕಡೆಗೆ ನಡೆದರೆ, ಜಂಪಾ ಮುಖದಲ್ಲಿ ಮಂದಹಾಸ ಮೂಡಿತು.
ಜಂಪಾ ಅವರ ಮನವಿಯನ್ನು ನೇರವಾಗಿ ಪುರಸ್ಕರಿಸದ ಫೀಲ್ಡ್ ಅಂಪೈರ್ಗಳು ಟಿವಿ ಅಂಪೈರ್ಗಳ ಮುಂದಿಟ್ಟರು. ಅವರು ವಿಡಿಯೊವನ್ನು ನಿಧಾನವಾಗಿ ಪರಿಶೀಲಿಸಿದಾಗ ರೋಜರ್ ಔಟ್ ಅಲ್ಲ ಎಂಬುದು ಗೊತ್ತಾಯಿತು. ಏಕೆಂದರೆ ಬೌಲಿಂಗ್ ಮಾಡುತ್ತಿದ್ದ ಆ್ಯಡಂ ಜಂಪಾ ಅವರು ರೋಜರ್ ಕ್ರೀಸ್ ಬಿಡುವ ಮೊದಲು ಬೌಲಿಂಗ್ ಆ್ಯಕ್ಷನ್ ಪೂರ್ತಿಗೊಳಿಸಿದ್ದರು. ಅಂದರೆ ಚೆಂಡೆಸೆಯುವ ಅವರ ಬಲಗೈ ಕ್ರೀಸ್ನ ಮುಂಭಾಗದ ಗೆರೆಯನ್ನು ದಾಟಿತ್ತು.
ಐಸಿಸಿ ಹೊಸ ನಾನ್‌ಸ್ಟ್ರೈಕ್ ಎಂಡ್ ರನ್‌ಔಟ್ ನಿಯಮದ ಪ್ರಕಾರ ಬೌಲರ್ ತಮ್ಮ ಆ್ಯಕ್ಷನ್ ಪೂರ್ತಿಗೊಳಿಸಿದ ಬಳಿಕ ಬ್ಯಾಟರ್ ಕ್ರೀಸ್ ಬಿಟ್ಟಿದ್ದರೆ ಅದನ್ನು ರನ್‌ಔಟ್ ಎಂದು ಪರಿಗಣಿಸಲಾಗುವುದಿಲ್ಲ. ಬೌಲರ್ ಓಡಿ ಬರುವ ಮೊದಲು ಅಥವಾ ಮುಂದಿನ ಗೆರೆ ದಾಟುವ ಮೊದಲು ಕ್ರಿಸ್ ಬಿಟ್ಟಿದ್ದರೆ ಮಾತ್ರ ಔಟ್. ಹೀಗಾಗಿ ಜಂಪಾ ಅವರ ಮನವಿಯನ್ನು ಅಂಪೈರ್ಗಳು ತಿರಸ್ಕರಿಸಿದರು. ಫೀಲ್ಡರ್ ಅಂಪೈರ್ಗಳು ರೋಜರ್ ಅವರನ್ನು ವಾಪಸ್ ಕರೆಸಿಕೊಂಡರೆ, ಜಂಪಾ ಪೆಚ್ಚು ಮೋರೆ ಹಾಕಿಕೊಂಡು ಹೊರ ನಡೆದರು.
ಇದನ್ನೂ ಓದಿ | Deepti Sharma | ನಾನ್‌ಸ್ಟ್ರೈಕ್ ರನ್‌ಔಟ್ ಬಗ್ಗೆ ಮೌನ ಮುರಿದ ದೀಪ್ತಿ; ಏನೆಂದರು ಭಾರತೀಯ ಬೌಲರ್?