Site icon Vistara News

AFG vs BAN: ಆಫ್ಘನ್​ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ಸಚಿನ್​ ತೆಂಡೂಲ್ಕರ್​

AFG vs BAN

AFG vs BAN: Legend Sachin Tendulkar Celebrates Afghanistan's Historic World Cup Run

ಮುಂಬಯಿ: ಬಾಂಗ್ಲಾದೇಶವನ್ನು ಮಣಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ(Afghanistan vs Bangladesh) ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಅಫಘಾನಿಸ್ತಾನ ತಂಡದ ಸಾಧನೆಯನ್ನು ಕೊಂಡಾಡಿದ ಸಚಿನ್​, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ಶುಭ ಹಾರೈಸಿದ್ದಾರೆ.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

ಏಕದಿನ ವಿಶ್ವಕಪ್​ ವೇಳೆಯೂ ಪ್ರಶಂಸೆ ವ್ಯಕ್ತಪಡಿಸಿದ್ದ ಸಚಿನ್​

ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಸಚಿನ್​ ತೆಂಡೂಲ್ಕರ್​ ಅವರು ಪಾಕಿಸ್ತಾನವನ್ನು ಮಣಿಸಿದ ಬಳಿ ಅಫಫಾನಿಸ್ತಾನ ತಂಡವನ್ನು ಹೊಗಳಿದ್ದರು. “ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಬರೆದುಕೊಂಡಿದ್ದರು.

ಆಫ್ಘನ್​ನಲ್ಲಿ ಸಂಭ್ರಮಾಚರಣೆ


ಅಫಘಾನಿಸ್ತಾನ ತಂಡ ಐತಿಹಾಸಿಕ ಸಾಧನೆ ಮಾಡಿದ ಸಂತಸಲ್ಲಿ ಆಫ್ಘನ್ನರು ತಮ್ಮ ದೇಶದಲ್ಲಿ , ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಕೆಲವು ಕಡೆ ಪೊಲೀಸರು ಲಘು ಲಾಠಿ ಚಾರ್ಜ್​ ಮತ್ತು ನೀರು ಬಿಟ್ಟು ಗುಂಪು ಗೂಡಿದ ಜನರನ್ನು ಚದುರಿಸಲು ಹರ ಸಾಹಸ ಪಟ್ಟ ಘಟನೆಯೂ ಸಂಭವಿಸಿದೆ.

ಅಫಘಾನಿಸ್ತಾನ ಜೂನ್​ 26ರಂದು(ನಾಳೆ) ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ. ಗೆದ್ದರೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಜತೆಗೆ ಕಪ್​ ಗೆದ್ದಷ್ಟೇ ಸಂಭ್ರಮ ಆಚರಿಸಲಿದೆ.

Exit mobile version