ಪುಣೆ: ಬಲಿಷ್ಠ ತಂಡಗಳಿಗೆ ಸೋಲುಣಿಸಿದ ಜೋಶ್ನಲ್ಲಿರುವ ಶ್ರೀಲಂಕಾ ಮತ್ತು ಅಫಘಾನಿಸ್ತಾನ(AFG vs SL) ತಂಡಗಳು ಸೋಮವಾರದ ವಿಶ್ವಕಪ್ನ(ODI World Cup 2023) 30ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸೆಮಿಫೈನಲ್ ಪ್ರವೇಶಕ್ಕೆ ಉಭಯ ತಂಡಗಳಿಗೆ ಇನ್ನೂ ಅವಕಾಶ ಇರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಬಹುದು. ಇಲ್ಲಿ ಗೆದ್ದ ತಂಡದ ಸೆಮಿ ಆಸೆ ಜೀವಂತವಿರಲಿದೆ. ಈ ತಂಡ ಯಾವುದುದು ಎಂಬುದು ಪಂದ್ಯದ ಕುತೂಹಲ.
ಉಭಯ ತಂಡಗಳು ಬಲಿಷ್ಠ
ಉಭಯ ತಂಡಗಳು ಸಮರ್ಥ ಮತ್ತು ಒಂದೇ ರೀತಿಯ ಪ್ರದರ್ಶನವನ್ನು ತೋರುತ್ತಿದೆ. ಆರಂಭಿಕ ಹಂತದಲ್ಲಿ ಸೋಲಿಗೆ ತುತ್ತಾಗಿದ್ದ ಈ ತಂಡಗಳು ಆ ಬಳಿಕ ವಿಶ್ವದ ಬಲಿಷ್ಠ ತಂಡಕ್ಕೆ ಸೋಲಿನ ರುಚಿ ತೋರಿಸಿ ಮೆರೆದಾಡಿತ್ತು. ಹೀಗಾಗಿ ಯಾರನ್ನು ದೂರುವ ಹಾಗಿಲ್ಲ. ಸೆಮಿ ಮಹತ್ವದ ಪಂದ್ಯವಾದ ಕಾರಣ ಹಲವು ನಿರೀಕ್ಷೆಗಳು ಇಡಲಾಗಿದೆ.
ಹವಾಮಾನ ವರದಿ
ಪುಣೆಯಲ್ಲಿ ಯಾವುದೇ ಮಳೇಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ಧಗೆ ಹೆಚ್ಚಿರಲಿದೆ ಎಂದು ತಿಳಿಸಿದೆ. ಪಂದ್ಯ ನಡೆಯುವ ಮಧ್ಯಾಹ್ನ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಇದರಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಂಜೆಯ ವೇಳೆ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್ ಶರ್ಮ
ಪಿಚ್ ರಿಪೋರ್ಟ್
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ನಡೆದ ಹಿಂದಿನ ಏಳು ಏಕದಿನ ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ 300 ಪ್ಲಸ್ ರನ್ ಆಗಿದೆ. ಆದರೆ ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು. ಏಕೆಂದರೆ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದರೆ, ಮೂರು ಬಾರಿ ಮಾತ್ರ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ವೇಗಿಗಳಿಗೆ ಇಲ್ಲಿ ಹೆಚ್ಚು ಮೇಲುಗೈ ಸಾಧಿಸಬಹುದು. ಹೀಗಾಗಿ ಉಭಯ ತಂಡಗಳು ಸ್ಪಿನ್ಗಿಂತ ವೇಗದ ಬೌಲಿಂಗ್ಗೆ ಹೆಚ್ಚಿನ ಒತ್ತು ನೀಡಬಹುದು.
ಜಿದ್ದಾ ಜಿದ್ದು ನಿರೀಕ್ಷೆ
ಉಭಯ ತಂಡಗಳು ಕೂಡ ಸ್ಪಿನ್ ಪಿಚ್ನಲ್ಲಿ ಉತ್ತಮ ಪ್ರದರ್ಶನ ತೋರುವ ಕಾರಣ ಈ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ. ಅಲ್ಲದೆ ಅಫಘಾನಿಸ್ತಾನ ಮತ್ತು ಶ್ರೀಲಂಕಾ ಈಗಾಗಲೇ ಬಲಿಷ್ಠ ತಂಡಕ್ಕೆ ಸೋಲುಣಿಸಿದ ಜೋಶ್ನಲ್ಲಿದೆ. ಗೆಲುವು ಸಾಧಿಸಿದರೆ ಇತ್ತಂಡಗಳಿಗೂ ಸೆಮಿಫೈನಲ್ ಪ್ರವೇಶ ಪಡೆಯುವ ಅವಕಾಶವಿದೆ. ಹೀಗಾಗಿ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.
ಇದನ್ನೂ ಓದಿ IND vs ENG: ಆಂಗ್ಲರ ಬೌಲಿಂಗ್ ದಾಳಿಗೆ ಕುಸಿದ ಭಾರತ; ಇಂಗ್ಲೆಂಡ್ ಗೆಲುವಿಗೆ 230 ರನ್ ಗುರಿ
ಮುಖಾಮುಖಿ
ಅಫಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 11 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಶ್ರೀಲಂಕಾ 07 ಪಂದ್ಯಗಳನ್ನು ಗೆದ್ದಿದೆ. ಅಫಘಾನಿಸ್ತಾನ 03 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಬಲಾಬಲದ ಲೆಕ್ಕಾಚಾರದಲ್ಲಿ ಲಂಕಾ ಮುಂದಿದ್ದರೂ ಆಫ್ಘನ್ ಸವಾಲನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಏಕೆಂದರೆ ಆಫ್ಘನ್ ಸೋಲಿಸಿದ್ದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು. ಹೀಗಾಗಿ ಲಂಕಾ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕಿದೆ.
ಸಂಭಾವ್ಯ ತಂಡ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ಸಿ), ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರನ್, ಅಜ್ಮತುಲ್ಲಾ ಒಮರ್ಜೈ/ ನೂರ್ ಅಹ್ಮದ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಾಕ್ ಫಾರೂಕಿ.