Site icon Vistara News

AFG vs SL: ಆಫ್ಘನ್​ ಆಟಕ್ಕೆ ಮನಸೋತ ಸೆಹವಾಗ್​; ಪೋಸ್ಟ್​ ಮೂಲಕ ಮೆಚ್ಚುಗೆ

Afghanistan vs Sri Lanka

ನವದೆಹಲಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ(Afghanistan vs Sri Lanka) ತಂಡ ತೋರುತ್ತಿರುವ ಶ್ರೇಷ್ಠ ಪ್ರದರ್ಶನದ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಇದೇ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹವಾಗ್(Virender Sehwag)​ ಕೂಡ ಸೇರ್ಪಡೆಯಾಗಿದ್ದಾರೆ.​

​ಸೋಮವಾರದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಸೆಮಿಫೈನಲ್ ಆಸೆ ಜೀವಂತವಿರಿಸಿರುವ ಆಫ್ಘನ್ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸುಧಾರಣೆ ಕಂಡ ತಂಡ ಎಂದು ಸೆಹವಾಗ್​​ ಹೇಳಿದ್ದಾರೆ. “ಅಫ್ಘಾನಿಸ್ತಾನವು ವಿಶ್ವಕಪ್​ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾದ ಹಾಲಿ ವಿಶ್ವ ಚಾಂಪಿಯನ್​ ಇಂಗ್ಲೆಂಡ್​, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿದೆ. ತಂಡದ ಆತ್ಮವಿಶ್ವಾಸವನ್ನು ನೋಡುವಾಗ ಸೆಮಿಫೈನಲ್​ಗೇರುವ ವಿಶ್ವಾಸವಿದೆ. ಒಂದೊಮ್ಮೆ ಈ ಬಾರಿ ಸಾಧ್ಯವಾಗದಿದ್ದರೂ ಮುಂದಿನ ವಿಶ್ವಕಪ್​ ಟೂರ್ನಿಯಲ್ಲಿ ಅಫಘಾನಿಸ್ತಾನವೂ ಕಪ್​ ಗೆಲ್ಲುವ ಮತ್ತು ಬಲಿಷ್ಠ ತಂಡವಾಗಿ ಸಿದ್ಧಗೊಂಡಿರುತ್ತದೆ” ಎಂದು ವೀರೂ ಭವಿಷ್ಯ ನುಡಿದಿದ್ದಾರೆ.

ಪಾಕ್​ ಆಟಗಾರನಿಂದಲೂ ಮೆಚ್ಚುಗೆ

ಅಫಘಾನಿಸ್ತಾನ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ್ದರೂ, ಲಂಕಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಆಫ್ಘನ್ ತಂಡದ ಪ್ರದರ್ಶನಕ್ಕೆ ಪಾಕಿಸ್ತಾನದ ಮಾಜಿ ನಾಯಕ ಮತ್ತು ಆಟಗಾರ​ ಶಾಹೀದ್​ ಅಫ್ರಿದಿ ಮೆಚ್ಚುಗೆ ಸೂಚಿಸಿದ್ದಾರೆ. “ತಂಡದ ಆಲ್​ರೌಂಡರ್​ ಪ್ರದರ್ಶನ ನಿಜಕ್ಕೂ ಮೆಚ್ಚಲೇ ಬೇಕು. ಇದೇ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಬಲಿಷ್ಠರಾಗಿ” ಎಂದರು.

ಸೆಮಿ ಆಸೆ ಜೀವಂತ

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಅಫಘಾನಿಸ್ತಾನ ತಂಡ ಲಂಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ಸು ಸಾಧಿಸಿತು. ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾ ಪಡೆ 49.3 ಓವರ್​ಗಳಲ್ಲಿ 241 ರನ್​ ಗಳಿಗೆ ಆಲ್​ಔಟ್ ಆಯಿತು. ಜವಾಬಿತ್ತ ಆಪ್ಘನ್​ 26 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ಕಳೆದುಕೊಂಡು 242 ರನ್ ಬಾರಿಸಿ ಜಯಶಾಲಿಯಾಯಿತು. ಈ ಗೆಲುವಿನೊಂದಿಗೆ ಆಫ್ಘನ್​ ತಂಡದ ಸೆಮಿಫೈನಲ್​ ಆಸೆ ಇನ್ನೂ ಜೀವಂತವಾಗಿದೆ.

ಇದನ್ನೂ ಓದಿ ICC World Cup 2023: ಆಫ್ಘನ್​ ತಂಡದ ಸೆಮಿ ಫೈನಲ್​ ಲೆಕ್ಕಾಚಾರ ಹೇಗಿದೆ?

ಅಫಘಾನಿಸ್ತಾನ ತಂಡದ ಸೆಮಿಫೈನಲ್​ ಲೆಕ್ಕಾಚಾರ

ಸದ್ಯ ಅಫಘಾನಿಸ್ತಾನ ತಂಡ 6 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು 6 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳು ಬಾಕಿ ಇವೆ. ಎದುರಾಳಿಗಳು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್​. ಈ ಮೂರು ಪಂದ್ಯಗಳನ್ನು ಆಫ್ಘನ್ ಗೆದ್ದರೆ 12 ಅಂಕ ಲಭಿಸಿಸಿ ಸೆಮಿಫೈನಲ್​ ಪ್ರವೇಶ ಪಡೆಯಬಹುದು. ಆದರೆ ಇಲ್ಲೂ ಕೆಲ ಲೆಕ್ಕಾಚಾರಗಳಿವೆ.

4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಸದ್ಯ 8 ಅಂಕ ಹೊಂದಿದ್ದು. ಈ ತಂಡಕ್ಕೂ ಮೂರು ಪಂದ್ಯ ಬಾಕಿ ಇದೆ. ಒಂದೊಮ್ಮೆ ಆಸ್ಟ್ರೇಲಿಯಾ ತಂಡ ಆಫ್ಘನ್ ವಿರುದ್ಧ ಸೋತರೂ ಆಸೀಸ್​ಗೆ ಸೆಮಿ ರೇಸ್​ನಿಂದ ಹೊರ ಬೀಳುವುದಿಲ್ಲ. ಮುಂದಿನ 2 ಪಂದ್ಯಗಳನ್ನು ಗೆದ್ದರೆ ಆಸೀಸ್​ಗೂ 12 ಅಂಕ ಆಗಲಿದೆ. ಆಗ ಆಸೀಸ್​ಗೂ ಸೆಮಿ ಅವಕಾಶವಿದೆ. ಆಸ್ಟ್ರೇಲಿಯಾ 2 ಪಂದ್ಯದಲ್ಲಿ ಸೋತು, ಆಫ್ಘನ್​ ಮೂರರಲ್ಲಿ ಗೆದ್ದರೆ ಸೆಮಿ ಟಿಕೆಟ್​ ಆಫ್ಘನ್​ಗೆ ಸಿಗಲಿದೆ. ಒಂದೊಮ್ಮೆ ಆಸ್ಟ್ರೇಲಿಯಾ ಮೂರರಲ್ಲಿ ಒಂದು ಪಂದ್ಯ ಮಾತ್ರ ಗೆದ್ದು ಆಫ್ಘನ್​ ಮೂರರಲ್ಲಿ 2 ಪಂದ್ಯ ಗೆದ್ದರೆ ಇತ್ತಂಡಗಳಿಗೂ ತಲಾ 10 ಅಂಕ ಆಗಲಿದೆ. ಆಗ ರನ್​ ರೇಟ್​ನಲ್ಲಿ ಯಾರು ಮುಂದಿರುತ್ತಾರೋ ಅವರಿಗೆ ಸೆಮಿಯ ಅದೃಷ್ಟ ದೊರಕಲಿದೆ.

Exit mobile version