ಗಯಾನ: ಏಕಪಕ್ಷೀಯವಾಗಿ ನಡೆದ ಮಂಗಳವಾರದ ಟಿ20 ವಿಶ್ವಕಪ್(T20 World Cup 2024) ಪಂದ್ಯದಲ್ಲಿ ಕ್ರಿಕೆಟ್ ಶಿಶು ಉಗಾಂಡ(AFG vs UGA) ವಿರುದ್ಧ ಅಫಘಾನಿಸ್ತಾನ 125 ರನ್ಗಳ ಬೃಹತ್ ಗೆಲುವು ಸಾಧಿಸಿದೆ. ಫಜಲ್ಹಕ್ ಫಾರೂಕಿ ಕೇವಲ 9 ರನ್ಗೆ 5 ವಿಕೆಟ್ ಕಿತ್ತು ಅಫಘಾನಿಸ್ತಾನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ಫುಲ್ ಜೋಶ್ನಲ್ಲಿಯೇ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 183 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉಂಗಾಡ 58 ರನ್ಗೆ ಸರ್ವಪತನ ಕಂಡಿತು.
ಚೇಸಿಂಗ್ ವೇಳೆ ಉಂಗಾಡ ಬ್ಯಾಟರ್ಗಳು ಫಜಲ್ಹಕ್ ಫಾರೂಕಿ ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಸತತವಾಗಿ ವಿಕೆಟ್ ಕಳೆದುಕೊಂಡರು. ಕೇವಲ 2 ಬ್ಯಾಟರ್ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದವರೆಲ್ಲರು ಸಿಂಗಲ್ ಡಿಜಿಟ್ಗೆ ಸೀಮಿತರಾದರು. ಫಾರೂಕಿ 4 ಓವರ್ಗೆ ಕೇವಲ 9 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಿತ್ತು ಜೀವಮಾನ ಶ್ರೇಷ್ಠ ಸಾಧನೆ ತೋರಿದರು. ಜತೆಗೆ ಟಿ20 ವಿಶ್ವಕಪ್ನಲ್ಲಿ ಅತಿ ಕಡಿಮೆ ರನ್ ನೀಡಿ ಅತ್ಯಧಿಕ ವಿಕೆಟ್ ಕಿತ್ತ ಅಫ್ಘಾನ್ನ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಒಟ್ಟಾರೆಯಾಗಿ 4ನೇ ಬೌಲರ್ ಎನಿಸಿಕೊಂಡರು. ದಾಖಲೆ ಶ್ರೀಲಂಕಾದ ಅಜಂತಾ ಮೆಂಡೀಸ್ ಹೆಸರಿನಲ್ಲಿದೆ. 2012ರಲ್ಲಿ ಮೆಂಡೀಸ್ ಅವರು ಜಿಂಬಾಬ್ವೆ ವಿರುದ್ಧ 8 ರನ್ಗೆ 6 ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ SA vs SL: ಲಂಕಾ ದಹನ ಮಾಡಿದ ನೋರ್ಜೆ; ಹರಿಣ ಪಡೆಗೆ 6 ವಿಕೆಟ್ ಜಯ
ಗುರ್ಬಾಜ್-ಜದ್ರಾನ್ ಅರ್ಧಶತಕದ ಆಟ
ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನಕ್ಕೆ ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಅರ್ಧಶತಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಉಭಯ ಆಟಗಾರರು ಕೂಡ ಬಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿ ಉಂಗಾಡ ಬೌಲರ್ಗಳ ಬೆವರಿಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಬರೋಬ್ಬರಿ 154 ರನ್ಗಳ ಜತೆಯಾಟ ನಡೆಸಿತು.
ಗುರ್ಬಾಜ್ 45 ಎಸೆತಗಳಿಂದ ತಲಾ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 76 ರನ್ ಬಾರಿಸಿದರೆ, ಇವರ ಜತೆಗಾರ ಜದ್ರಾನ್ 46 ಎಸೆತಗಳಿಂದ 70 ರನ್ ಬಾರಿಸಿದರು. ಬಾರಿಸಿದ್ದು 9 ಬೌಂಡರಿ ಮತ್ತು 1 ಸಿಕ್ಸರ್. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಕಂಡುಬರಲಿಲ್ಲ. ನಜೀಬುಲ್ಲಾ(2), ಗುಲ್ಬದಿನ್(4), ಅಜ್ಮತುಲ್ಲಾ(5) ರನ್ ಗಳಿಸಿದರು.