Site icon Vistara News

ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆದ ಅಫಘಾನಿಸ್ತಾನ

Afghanistan qualify for Champions Trophy

ಮುಂಬಯಿ: ಭಾರತದ ಆತಿಥ್ಯದಲ್ಲಿ ಸಾಗುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ(World Cup 2023) ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ತೋರುತ್ತಿರುವ ಅಫಘಾನಿಸ್ತಾನ ತಂಡ 2025ರಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿಗೆ(ICC Champions Trophy 2025) ಅರ್ಹತೆ ಪಡೆದಿದೆ. ಈ ಮೂಲಕ ಚೊಚ್ಚಲ ಬಾರಿಗೆ ಈ ಟೂರ್ನಿಯಲ್ಲಿ ಕಮಾಲ್​ ಮಾಡಲು ಸಿದ್ಧವಾಗಿದೆ. ಈ ಕೂಟ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿದೆ.

ವಿಶ್ವಕಪ್‌ನಲ್ಲಿ ಆಡುತ್ತಿರುವ ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಅಗ್ರ 7 ತಂಡಗಳು ಮತ್ತು ಆತಿಥೇಯ ಪಾಕಿಸ್ತಾನ ತಂಡ ಸೇರಿ ಒಟ್ಟು 8 ತಂಡಗಳು ಅರ್ಹತೆ ಪಡೆದುಕೊಳ್ಳಲಿದೆ. ಅಫಘಾನಿಸ್ತಾನ ತಂಡ ಉಳಿದಿರುವ ಎರಡು ಪಂದ್ಯಗಳನ್ನು ಸೋತರೂ 7ನೇ ಸ್ಥಾನಕ್ಕಿಂತ ಕುಸಿತ ಕಾಣುವುದಿಲ್ಲ. ಹೀಗಾಗಿ ತಂಡಕ್ಕೆ ಅರ್ಹತೆ ಲಭಿಸಿದೆ.

ಇಂಗ್ಲೆಂಡ್​ ಬಹುತೇಕ ಔಟ್​

ಕ್ರಿಕೆಟ್​ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಒಂದೊಮ್ಮೆ ಉಳಿದಿರುವ 2 ಪಂದ್ಯಗಳನ್ನು ಗೆದ್ದರೂ ಆಂಗ್ಲರ ಪಡೆ 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆಯುವುದು ಕಷ್ಟ. ಹೀಗಾಗಿ ಮೊದಲ ಬಾರಿಗೆ ಈ ಟೂರ್ನಿಗೆ ಅರ್ಹತೆ ಪಡೆಯದ ಅವಮಾನಕ್ಕೆ ಸಿಲುಕಲಿದೆ.

ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. 7 ರಿಂದ ಕೆಳಗಿರುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ.

ಇದನ್ನೂ ಓದಿ Ind vs Pak : ಭಾರತ- ಪಾಕ್​ ಸೆಮಿಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆಯೇ? ಇದ್ದರೆ ಅದು ಹೇಗೆ?

ಅಸಮಾಧಾನ

ಐಸಿಸಿ 2021ರಲ್ಲೇ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆಯ ನಿಯಮಗಳನ್ನು ಅಂತ್ಯಗೊಳಿಸಿದ ವಿಚಾರದಲ್ಲಿ ಈಗ ಹಲವು ಕ್ರಿಕೆಟ್‌ ಸಂಸ್ಥೆಗಳು ಅಸಮಾಧಾನ ಹೊರಹಾಕಿದೆ. ತಮಗೆ ಈ ಅರ್ಹತೆಯ ಲೆಕ್ಕಾಚಾರಗಳ ಬಗ್ಗೆ ಸೂಕ್ತ ಮಾಹಿತಿಯೇ ಇರಲಿಲ್ಲ ಎಂದು ಐಸಿಸಿ ವಿರುದ್ಧ ಆರೋಪ ಮಾಡಿವೆ. ಆದರೆ ಐಸಿಸಿ ಮಾತ್ರ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

ಹಿಂದಿನ ನಿಯಮ ಹೇಗಿತ್ತು?

ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ. ಈ ಬಾರಿಯ ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್ ಈ ಟೂರ್ನಿಯನ್ನು ಆಡುವ ಅವಕಾಶದಿಂದ ವಂಚಿತವಾಗಿದೆ. ಒಂದೊಮ್ಮೆ ಈ ಹಿಂದಿನ ಶ್ರೇಯಾಂಕ ನಿಯಮ ಜಾರಿಯಲ್ಲಿ ಇರುತ್ತಿದ್ದರೆ ವಿಂಡೀಸ್​ಗೂ ಅವಕಾಶ ಸಿಗುವ ಸಾಧ್ಯತೆ ಇರುತ್ತಿತ್ತು.

Exit mobile version