ಹಂಬಂಟೋಟ: ಪಾಕಿಸ್ತಾನ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಫಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್(151) ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದಾರೆ. ಈ ಮೂಲಕ ಪಾಕ್ ವಿರುದ್ಧ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಗುರ್ಬಾಜ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭರ್ತಿ 300 ರನ್ ಪೇರಿಸಿ ಸವಾಲೊಡ್ಡಿದೆ.
ದ್ವಿಶತಕದ ಜತೆಯಾಟ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್ಗೆ ಗುರ್ಬಾಜ್ ಮತ್ತು ಇಬ್ರಾಹಿಂ ಜರ್ದಾನ್ ಆರಂಭದಿಂದಲೇ ಪಾಕ್ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಯನ್ನೇ ಸುರಿಸಿದರು. ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟಕ್ಕೆ ಪಾಕ್ ಬೌಲರ್ಗಳು ಸರಿಯಾಗಿ ದಂಡಿಸಿಕೊಂಡರು. ಗುರ್ಬಾಜ್ ಮತ್ತು ಇಬ್ರಾಹಿಂ ಸೇರಿಕೊಂಡು ಮೊದಲ ವಿಕೆಟ್ಗೆ ರನ್ ಬರೋಬ್ಬರಿ 227 ರಾಶಿ ಹಾಕಿದರು. ಇಬ್ರಾಹಿಂ ಅವರು 80 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. 101 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಇಬ್ರಾಹಿಂ ವಿಕೆಟ್ ಪತನಗೊಂಡರೂ ಮತ್ತೊಂದು ತುದಿಯಲ್ಲಿ ಸಿಡಿಯುತ್ತಿದ್ದ ಗುರ್ಬಾಜ್ ಶತಕ ಬಾರಿಸಿ ಸಂಭ್ರಮಿಸಿದರು. 14 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 151 ರನ್ ಬಾರಿಸಿದರು. ಉತ್ತಮ ಸ್ಥಿತಿಯಲ್ಲಿದ್ದ ಅಫ್ಘಾನ್ ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಹಠಾತ್ ಕುಸಿತಕ್ಕೆ ಒಳಗಾಯಿತು. ಆ ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ವಿಫಲರಾದರು. ಹಿರಿಯ ಆಟಗಾರ ಮೊಹಮ್ಮದ್ ನಬಿ 29 ರನ್ಗಳ ಕೊಡುಗೆ ನೀಡಿದರು.
ಇದನ್ನೂ ಓದಿ ICC Odi Ranking: ಪಾಕ್ ಆಟಗಾರನನ್ನು ಹಿಂದಿಕ್ಕಿ ಮೇಲೇರಿದ ಶುಭಮನ್ ಗಿಲ್
ಉಭಯ ತಂಡಗಳ ಆಡುವ ಬಳಗ
ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ , ರಿಯಾಜ್ ಹಸನ್ , ಹಶ್ಮತುಲ್ಲಾ ಶಾಹಿದಿ (ನಾಯಕ) , ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ಶಾಹಿದುಲ್ಲಾ ಕಮಾಲ್.
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರಾವುಫ್.