ಶಾರ್ಜಾ : ಏಷ್ಯಾ ಕಪ್ (Asia Cup-2022) ಟೂರ್ನಿಯ ಗುಂಪು ಹಂತದ ಪಂದ್ಯಗಳು ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳ ನಡುವಿನ ಪಂದ್ಯದೊಂದಿಗೆ ಮುಕ್ತಾಯಗೊಂಡಿದ್ದು, ಶನಿವಾರ ಸೂಪರ್-೪ ಹಂತದ ಹಣಾಹಣಿಗಳು ನಡೆಯಲಿವೆ. ಗುಂಪು ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೂಪರ್-೪ ಹಂತದಲ್ಲಿ ಸ್ಪರ್ಧಿಸಲಿವೆ. ಎ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ಹಾಗೂ ಬಿ ಗುಂಪಿನಿಂದ ಅಫಘಾನಿಸ್ತಾನ ಹಾಗೂ ಶ್ರೀಲಂಕಾ ತಂಡ ಸೂಪರ್-೪ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಶನಿವಾರ ಬಿ ಗುಂಪಿನ ತಂಡಗಳಾದ ಅಫಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಗುಂಪು ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ಅಫಘಾನಿಸ್ತಾನ ತಂಡ ನೇರವಾಗಿ ಸೂಪರ್-೪ ಹಂತಕ್ಕೇರಿದ್ದರೆ, ಬಾಂಗ್ಲಾದೇಶ ತಂಡದ ವಿರುದ್ಧ ವೀರೋಚಿತ ೨ ವಿಕೆಟ್‌ಗಳ ಜಯ ಸಾಧಿಸಿದ ಶ್ರೀಲಂಕಾ ತಂಡ ಎರಡನೇ ತಂಡವಾಗಿ ಪ್ರವೇಶ ಪಡೆದುಕೊಂಡಿದೆ. ಎ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡವನ್ನು ಮಣಿಸಿದ ಭಾರತ ನೇರ ಪ್ರವೇಶ ಪಡೆದುಕೊಂಡಿದ್ದರೆ, ಪಾಕಿಸ್ತಾನ ತಂಡ ತನ್ನ ಎರಡನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ೧೫೫ ರನ್‌ಗಳ ಭರ್ಜರಿ ಜಯ ದಾಖಲಿಸಿ ಎರಡನೇ ತಂಡವಾಗಿ ಸೂಪರ್-೪ ಹಂತಕ್ಕೇರಿದೆ
ಹುಮ್ಮಸ್ಸಿನಲ್ಲಿದೆ ಆಫ್ಘಾನ್
ಎರಡು ಗೆಲುವಿನ ಆತ್ಮ ವಿಶ್ವಾಸದಲ್ಲಿರುವ ಅಫಫಾನಿಸ್ತಾನ ತಂಡ ಶನಿವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಎದುರಾಗಲಿದೆ. ಟಿ೨೦ ಮಾದರಿಯಲ್ಲಿ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವ ಮೊಹಮ್ಮದ್ ನಬಿ ನಾಯಕತ್ವದ ಅಫಘಾನಿಸ್ತಾನ ತಂಡ, ಉತ್ತಮ ಪ್ರದರ್ಶನ ತೋರಲು ಹೆಣಗಾಡುತ್ತಿರುವ ಶ್ರೀಲಂಕಾ ತಂಡಕ್ಕೆ ಎದುರಾಗಲಿದೆ. ಲೀಗ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಕಂಡಿರುವ ಮೊಹಮ್ಮದ್ ನಬಿ ಬಳಗ ಗೆಲ್ಲುವ ನೆಚ್ಚಿನ ತಂಡವಾಗಿದೆ. ಬಾಂಗ್ಲಾದೇಶ ವಿರುದ್ಧ ರೋಚಕ ಗೆಲುವು ಸಾಧಿಸಿ ಸೂಪರ್- 4 ಹಂತಕ್ಕೆ ಗೆ ಲಗ್ಗೆಯಿಟ್ಟಿರುವ ಸಿಂಹಳೀಯರು ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.
ಸಂಭಾವ್ಯ ತಂಡಗಳು
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ) ರಹಮಾನುಲ್ಲಾ ಗುರ್ಬಜ್ (ವಿಕೆಟ್‌ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಝದ್ರಾನ್, ಹಜರತುಲ್ಲಾ ಜಜೈ, ಕರೀಮ್ ಜಾನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜೈ, ನವೀನ್–ಉಲ್–ಹಕ್, ಮುಜೀಬ್ ಉರ್ ರಹಮಾನ್, ಫಜಲ್ ಹಕ್ ಫಾರೂಕಿ.
ಶ್ರೀಲಂಕಾ: ದಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾಥುಮ್ ನಿಸ್ಸಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕ ರಾಜಪಕ್ಷ, ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ.
ಪಂದ್ಯದ ವಿವರ
ಸ್ಥಳ : ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್
ಸಮಯ: ರಾತ್ರಿ ೭.೩೦ರಿಂದ
ನೇರ ಪ್ರಸಾರ : ಸ್ಟಾರ್ ಸ್ಪೋಟ್ಸ್ ನೆಟ್ವರ್ಕ್, ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್