Site icon Vistara News

Ind vs Sa t20 | 4 ಪಂದ್ಯಗಳಲ್ಲಿ ನಾಟೌಟ್‌ ಆಗಿದ್ದ ಮಿಲ್ಲರ್‌ ಔಟಾಗಿದ್ದೇ ಭಾರತದ ಗೆಲುವಿಗೆ ಕಾರಣವಾಯಿತೇ?

ಡೇವಿಡ್‌ ಮಿಲ್ಲರ್

ನವದೆಹಲಿ: ಸತತ ಎರಡು ಸೋಲುಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ (Ind vs Sa t20) ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಪಂತ್‌ ಪಡೆ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು ಎರಡು ಪಂದ್ಯಗಳನ್ನು ಸೋತ ರೀತಿಯನ್ನು ಕಂಡು ಭಾರತದ ಬೌಲರ್‌ಗಳ ಮೇಲಿದ್ದ ಭರವಸೆಯೇ ನಾಶವಾಗಿತ್ತು. ಆದರೆ, ಮೂರನೇ ಪಂದ್ಯದಲ್ಲಿ ಬೌಲರ್‌ಗಳ ಆರ್ಭಟವೇ ಪಂದ್ಯದ ಗೆಲುವಿಗೆ ಕಾರಣವಾಯಿತು. ಅದರಲ್ಲೂ ಅದ್ಭುತ ಫಾರ್ಮ್‌ನಲ್ಲಿದ್ದ, ಕಳೆದ ನಾಲ್ಕು ಪಂದ್ಯಗಳಿಂದ ನಾಟೌಟ್‌ ಆಗಿರುವ ಡೇವಿಡ್‌ ಮಿಲ್ಲರ್‌ ಈ ಪಂದ್ಯದಲ್ಲಿ ಔಟಾದರು. ಡೇವಿಡ್‌ ಮಿಲ್ಲರ್‌ ವಿಕೆಟ್‌ ಕಬಳಿಸಿದ ಹರ್ಷಲ್‌ ಪಟೇಲ್‌ಗೆ ಇದೊಂದು ಸಂಭ್ರಮದ ಗಳಿಗೆಯಾಗಿದ್ದರೆ ಭಾರತದ ಗೆಲುವಿಗೆ ಈ ವಿಕೆಟ್‌ ಮುನ್ನುಡಿ ಬರೆಯಿತು.

ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿರಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು ʼಈ ಪಂದ್ಯ ನನ್ನದೇʼ ಎಂಬ ಜೋಶ್‌ನಲ್ಲಿ ಆಡಿದ ಹಾಗಿತ್ತು. ಇಷನ್‌ ಕಿಶನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರ ಅದ್ಭುತ ಅರ್ಧಶತಕ 180 ರನ್‌ಗಳ ಟಾರ್ಗೆಟ್‌ ನೀಡಲು ನೆರವಾಯಿತು. ಆದರೆ, ಇದಕ್ಕೂ ಮಿಗಿಲಾಗಿ ಬೌಲರ್ಸ್‌ ಅತ್ಯುತ್ತಮ ಪ್ರದರ್ಶನ ನೀಡಿದರು.

ಯುಜ್ವೇಂದ್ರ ಚಾಹಲ್‌ ಮಾಡಿದ ಕಮಾಲ್‌ಗೆ ದಕ್ಷಿಣ ಆಫ್ರಿಕ ತಂಡದ ಬೆನ್ನೆಲುಬಾದ ವ್ಯಾನ್‌ಡರ್‌ ಡುಸೇನ್‌, ಕ್ಲಾಸೀನ್‌ ಅವರ ವಿಕೆಟ್‌ ಪತನಗೊಂಡಿತು. ಅಷ್ಟಾದರೂ ಡೇವಿಡ್‌ ಮಿಲ್ಲರ್‌ ಎಂಬ ಡೇಂಜರಸ್‌ ಬ್ಯಾಟರ್‌ ಮ್ಯಾಚಿನ ದಿಕ್ಕು ಬದಲಾಯಿಸಬಹುದು ಎಂಬ ಭಯವಿತ್ತು. ಅದಕ್ಕೆ ಕಾರಣ ಅವರ ಈಗಿನ ಫಾರ್ಮ್!‌

ಡೇವಿಡ್‌ ಮಿಲ್ಲರ್‌ ಕಳೆದ ನಾಲ್ಕು ಟಿ20 ಪಂದ್ಯಗಳಲ್ಲಿ ಅಜೇಯರಾಗಿಯೇ ಉಳಿದಿದ್ದರು. ಐಪಿಎಲ್‌ ಕ್ವಾಲಿಫೈಯರ್‌ನಿಂದ ಭಾರತದ ವಿರುದ್ಧದ 2ನೇ ಪಂದ್ಯದವರೆಗೂ ಮಿಲ್ಲರ್‌ ಒಂದೇ ಒಂದು ಪಂದ್ಯದಲ್ಲಿಯೂ ಔಟಾಗಿರಲಿಲ್ಲ. ಐಪಿಎಲ್‌ನಲ್ಲಿ ಗುಜರಾತ್‌ ತಂಡದ ಪರ ಬ್ಯಾಟಿಂಗ್‌ ಮಾಡಿದ ಡೇವಿಡ್‌ ಮಿಲ್ಲರ್‌ ಕ್ವಾಲಿಫೈಯರ್‌ನಲ್ಲಿ 68 ರನ್‌ ಹಾಗೂ ಫೈನಲ್‌ನಲ್ಲಿ 38 ರನ್‌ ಗಳಿಸಿದ್ದರು. ಭಾರತದ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 64ರನ್‌ ಹಾಗೂ ಎರಡನೇ ಪಂದ್ಯದಲ್ಲಿ ಅಜೇಯ 20 ರನ್‌ ಬಾರಿಸಿದ್ದರು.

11ನೇ ಓವರ್‌ನಲ್ಲಿ ಹರ್ಷಲ್‌ ಪಟೇಲ್‌ ಡೇವಿಡ್‌ ಮಿಲ್ಲರ್‌ಗೆ ಬೌಲ್‌ ಮಾಡಲು ಸಿದ್ಧರಾದರು. ಅಂತಿಮ ಬಾಲ್‌ ಸ್ಲೋ ಡೆಲಿವರಿ ಮಾಡಿದಕ್ಕೆ ಮಿಲ್ಲರ್‌ ಎಕ್ಸ್‌ಟ್ರಾ ಕವರ್‌ನಲ್ಲಿದ್ದ ಋತುರಾಜ್‌ ಗಾಯಕ್ವಾಡ್‌ಗೆ ಒಂದು ಸುಲಭದ ಕ್ಯಾಚ್‌ ನೀಡಿದರು. ಡೇವಿಡ್‌ ಮಿಲ್ಲರ್‌ ಔಟಾಗಿದ್ದನ್ನು ಕಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅನೇಕ ಹಾಸ್ಯಾತ್ಮಕ ಪೋಸ್ಟ್‌ಗಳನ್ನು ಹರಿಸಿದರು.

ಟ್ವಿಟರ್‌ನಲ್ಲಿ ಕಂಡುಬಂದ ಕೆಲ ತುಣುಕುಗಳು ಇಲ್ಲಿವೆ:

ʼಅಂತೂ ಇಂತೂ ಡೇವಿಡ್‌ ಮಿಲ್ಲರ್‌ ನಾಲ್ಕು ಮ್ಯಾಚ್‌ ಬಳಿಕ ಔಟಾದರು.ʼ

ʼಡೇವಿಡ್‌ ಮಿಲ್ಲರ್‌ ಔಟಾದರು. ಇನ್ನು ಇಂಡಿಯಾ ಮ್ಯಾಚ್‌ ಗೆಲ್ಲುತ್ತದೆ.ʼ

ʼಈ ಪಂದ್ಯದಲ್ಲಿ ಡೇವಿಡ್‌ ಮಿಲ್ಲರ್‌ ಅದ್ಭುತವಾಗಿ ಆಡಿದರೆ ಅವರನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿತ್ತು.ʼ

ಇದನ್ನೂ ಓದಿ: IND vs SA 3rd T2O | ಮೂರನೇ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

Exit mobile version