Site icon Vistara News

Dubai Rain: ಭಾರತೀಯ ಕುಸ್ತಿಪಟುಗಳ ಪ್ಯಾರಿಸ್​ ಒಲಿಂಪಿಕ್ಸ್​ ಕನಸಿಗೆ ತಣ್ಣೀರೆರಚಿದ ದುಬೈ ಮಳೆ

Dubai Rain

ದುಬೈ: ಗಲ್ಫ್ ರಾಷ್ಟ್ರದಲ್ಲಿ ಸುರಿದ (Dubai Rain) ಭಾರೀ ಮಳೆ (heavy Rain) ಹಾಗೂ ಹಠಾತ್‌ ಪ್ರವಾಹ (Flash Flood) ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಳೆ ಭಾರತೀಯ ಇಬ್ಬರು ಕುಸ್ತಿಪಟುಗಳ ಪ್ಯಾರಿಸ್​ ಒಲಿಂಪಿಕ್ಸ್​ ಕನಸಿಗೆ ತಣ್ಣೀರೆರಚಿದೆ. ಒಲಿಂಪಿಕ್ಸ್​ ಅರ್ಹತಾ ಪಂದ್ಯದಲ್ಲಿ ಸ್ಪರ್ಧಿಸಲು ಕಿರ್ಗಿಸ್ಥಾನದ ಬಿಷ್ಕೆಕ್‌ಗೆ(Bishkek) ತೆರಳ ಬೇಕಿದ್ದ ದೀಪಕ್‌ ಪೂನಿಯ(Deepak Punia) ಮತ್ತು ಸುಜೀತ್‌(Sujeet ) ಅವರು ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಈ ಟೂರ್ನಿಯಲ್ಲಿ ಆಡುವ ಅವಕಾಶದಿಂದ ವಂಚಿತಾಗಿದ್ದಾರೆ.

ಅಭೂತಪೂರ್ವ ಮಳೆಯಿಂದಾಗಿ ನಗರವು ಜಲಾವೃತಗೊಂಡು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ವದ ಅತ್ಯಂತ ಜನನಿಬಿಡ ವಾಯು ಕೇಂದ್ರದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರೀ ಮಳೆಯ ಪರಿಣಾಮ ಕಾರ್ಯಾಚರಣೆ ನಿಲ್ಲಿಸಿತು. ಹೀಗಾಗಿ ದೀಪಕ್ ಪುನಿಯಾ ಮತ್ತು ಸುಜೀತ್ ಕಲಕಲ್ ಗುರುವಾರ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡರು. ದುರದೃಷ್ಟಕರ ಸಂಗತಿ ಎಂದರೆ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡ 17 ಸದಸ್ಯರ ಭಾರತೀಯ ತಂಡವು ಬಿಷ್ಕೆಕ್ ತಲುಪಿತು, ಆದರೆ ಸುಜೀತ್ ಮತ್ತು ದೀಪಕ್ ದುಬೈನಲ್ಲಿ ಸಿಲುಕಿಕೊಂಡರು.

ದೀಪಕ್ ಪುನಿಯಾ ಅವರ 86 ಕೆಜಿ ವಿಭಾಗ ಮತ್ತು ಸುಜೀತ್ ಅವರ 65 ಕೆಜಿ ವಿಭಾಗದ ಸ್ಪರ್ಧೆಯನ್ನು ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿತ್ತು. ಮಳೆ ಬಿಕ್ಕಟಿನಿಂದ ಸಿಲುಕಿದ ಕಾರಣ ಪಂದ್ಯಗಳನ್ನು ಶುಕ್ರವಾರ ಮರು ನಿಗದಿಪಡಿಸಲಾಗಿತ್ತು. ಆದರೆ ಈ ಸಮಯಕ್ಕೂ ಕೂಡ ಅವರಿಗೆ ಅಲ್ಲಿಗೆ ತೆರಳಲು ಸಾಧ್ಯವಾಗದ ಕಾರಣ ಅಂತಿಮವಾಗಿ ಉಭಯ ಕುಸ್ತಿಪಟುgಳು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ತಮ್ಮ ಎರಡನೇ ಕೊನೆಯ ಅವಕಾಶವನ್ನು ಇಬ್ಬರು ಕುಸ್ತಿಪಟುಗಳು ಕಳೆದುಕೊಂಡರು.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್​ಗಾಗಿ ಸರ್ಕಾರಿ ಕಟ್ಟಡದಿಂದ ನೂರಾರು ವಲಸಿಗರ ತೆರವು

ಕಳೆದ ಎರಡು ದಿನಗಳಿಂದ ದುಬೈನಲ್ಲಿ ರನ್‌ವೇ ಕಾರ್ಯನಿರ್ವಹಿಸದ ಕಾರಣ ದೀಪಕ್ ಮತ್ತು ಸುಜೀತ್ ಬಿಷ್ಕೆಕ್‌ಗೆ ತೆರಳುವ ವಿಮಾನ ವಿಳಂಬವಾಗಿತ್ತು. ಹೀಗಾಗಿ ಇಬ್ಬರು ಕುಸ್ತಿಪಟುಗಳು ಏಷ್ಯನ್ ಅರ್ಹತಾ ಪಂದ್ಯಗಳ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಭಾರತದ ಕುಸ್ತಿ ಒಕ್ಕೂಟದ ಮೂಲವೊಂದು ಇಂಡಿಯಾ ಟುಡೇಗೆ ತಿಳಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಮೀಪಕ್ಕೆ ಬಂದಿದ್ದ ದೀಪಕ್, 2023ರಲ್ಲಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

“ತರಬೇತುದಾರರು ಮತ್ತು WFI ಅಧ್ಯಕ್ಷ ಸಂಜಯ್ ಸಿಂಗ್ ವಿಶ್ವ ಕುಸ್ತಿ ಸಂಸ್ಥೆ(UWW )ಗೆ ವಿನಂತಿಸಿದರೂ ಕೂಡ ಈ ಕುಸ್ತಿಪಟುಗಳಿಗೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಉಭಯ ಕುಸ್ತಿಪಟುಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತೇರ್ಗಡೆ ಯಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

Exit mobile version