ಅಹಮದಾಬಾದ್ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (INDvsAUS) ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳಾದ ಉಸ್ಮಾನ್ ಖ್ವಾಜಾ ಹಾಗೂ ಕ್ಯಾಮೆರಾನ್ ಗ್ರೀನ್ ವಿನೂತನ ಸಾಧನೆಯೊಂದನ್ನು ಮಾಡಿದ್ದಾರೆ. ಅವರಿಬ್ಬರೂ ಐದನೇ ವಿಕೆಟ್ಗೆ 200 ಪ್ಲಸ್ ರನ್ಗಳ ಜತೆಯಾಟ ನೀಡುವ ಮೂಲಕ ಭಾರತ ನೆಲದಲ್ಲಿ 43 ವರ್ಷಗಳ ಬಳಿಕ ದ್ವಿ ಶತಕದ ಸಾಧನೆ ಮಾಡಿದ ಆಸ್ಟ್ರೇಲಿಯಾದ ಬ್ಯಾಟರ್ಗಳೆನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ನಲ್ಲಿ 170 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜತೆಯಾದ ಗ್ರೀನ್ ಹಾಗೂ ಖ್ವಾಜಾ ತಂಡದ ಮೊತ್ತವನ್ನು 378ಕ್ಕೆ ಏರಿಸಿ ಬೇರ್ಪಟ್ಟರು. ಏತನ್ಮಧ್ಯೆ ಇಬ್ಬರೂ ತಮ್ಮ ತಮ್ಮ ಶತಕಗಳನ್ನು ಬಾರಿಸಿದ್ದರು. ಈ ಹಿಂದೆ 1970-80ರ ಕ್ರಿಕೆಟ್ ಋತುವಿನಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡದ ಪರ ಅಲನ್ ಬಾರ್ಡರ್ ಹಾಗೂ ಕಿಮ್ ಹ್ಯೂಸ್ 222 ರನ್ಗಳ ಜತೆಯಾಟ ನೀಡಿದ್ದರು. ಇದು ಆ ತಂಡದ ಪರ ಭಾರತದಲ್ಲಿ ಗರಿಷ್ಠ ರನ್ಗಳ ಜತೆಯಾಟವಾಗಿದೆ.
ಇದನ್ನೂ ಓದಿ : INDvsAUS : ಆಸ್ಟ್ರೇಲಿಯಾ ತಂಡ 480 ರನ್ಗಳಿಗೆ ಆಲ್ಔಟ್, ಆರ್ ಅಶ್ವಿನ್ಗೆ 6 ವಿಕೆಟ್
ಭಾರತದ ಸ್ಪಿನ್ ಪಿಚ್ಗಳಲ್ಲಿ ದೊಡ್ಡ ಮೊತ್ತದ ಜತೆಯಾಟ ನೀಡುವುದು ಪ್ರವಾಸಿ ತಂಡಗಳಿಗೆ ಸುಲಭವಲ್ಲ. ಅಂತೆಯೇ ಕಳೆದ 10 ವರ್ಷದ ಅವಧಿಯಲ್ಲಿ ದಾಖಲಾದ ಎರಡನೇ ದ್ವಿ ಶತಕದ ಜತೆಯಾಟ ಇದಾಗಿದೆ. 2021ರಲ್ಲಿ ಇಂಗ್ಲೆಂಡ್ ತಂಡ ಡಾಮ್ ಸಿಬ್ಲಿ ಹಾಗೂ ಜೋ ರೂಟ್ ದ್ವಿಶತಕ ಜತೆಯಾಟ ನೀಡಿದ್ದರು. ಆಸ್ಡ್ರೇಲಿಯಾದ ಕ್ಯಾಮೆರಾನ್ ಪಾಲಿಗೆ ಇದು ಚೊಚ್ಚಲ ಶತಕವೂ ಹೌದು.