ಕರಾಚಿ: ಐಸಿಸಿ ಏಕದಿನ ವಿಶ್ವಕಪ್(ICC World Cup 2023) ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 14 ರಂದು ಅಹಮದಾಬಾದ್ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕಣ್ತುಬಿಂಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಆದರೆ ಪಾಕಿಸ್ತಾನ ತಂಡದ ಮಾಜಿ ಆಟಗಾರ ಮೊಯಿನ್ ಖಾನ್(Moin Khan) ತವರು ತಂಡದ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಾಕ್ ಆಟಗಾರರಲ್ಲಿ ನಡುಕ
ಸಂದರ್ಶನವೊಂದಲ್ಲಿ ಮಾತನಾಡಿದ ಮೊಯಿನ್ ಖಾನ್, ‘ಪಾಕಿಸ್ತಾನ ತಂಡ ಈ ಹಿಂದಿನಿಂದಲೂ ಭಾರತ ವಿರುದ್ಧ ಆಡುವಾಗ ಒತ್ತಡ ಮತ್ತು ಭಯದಿಂದಲೇ ಕ್ರಿಕೆಟ್ ಆಡುತ್ತಾ ಬಂದಿದೆ. ಇದಕ್ಕೆ ವಿಶ್ವಕಪ್ ಇತಿಹಾಸವನ್ನೊಮ್ಮೆ ನೋಡಿದರೆ ಸಾಕು, ಒಂದು ಬಾರಿಯೂ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಗೆಲುವು ಸಾಧಿಸಲು ತಮ್ಮ ತಂಡದಿಂದ ಸಾಧ್ಯವಾಗಿಲ್ಲ. ಈ ಬಾರಿಯೂ ಇದೇ ಫಲಿತಾಂಶ ನಿರೀಕ್ಷಿತ. ಭಾರತ ತಂಡವನ್ನು ನೋಡುವಾಗ ಪಾಕ್ ತಂಡದಲ್ಲಿ ನಡುಕ ಹುಟ್ಟುವುದು ಖಚಿತ’ ಎಂದು ಹೇಳಿದ್ದಾರೆ.
ಭಾರತವನ್ನು ಮಣಿಸುವುದು ಅಸಾಧ್ಯ
“ತವರು ನೆಲದಲ್ಲಿ ಭಾರತ ತಂಡವನ್ನು ಮಣಿಸಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಈಗಾಗಲೇ ಎಲ್ಲ ತಂಡಗಳಿಗೂ ಅರಿವಿಗೆ ಬಂದಿದೆ. ಹೀಗಾಗಿ ಭಾರತಕ್ಕೆ ಮೂರನೇ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ. ತಂಡ ಕೂಡ ಹೆಚ್ಚು ಬಲಿಷ್ಠವಾಗಿದೆ. ಎಲ್ಲ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾಗೂ ತವರಿನ ಲಾಭ ಕೂಡ ಒಲಿಯಲಿದೆ. ಆದರೆ ಪಾಕ್ ತಂಡದ ಪ್ರದರ್ಶನವನ್ನು ನಿರೀಕ್ಷೆ ಮಾಡುವುದು ಕೊಂಚ ಕಷ್ಟ. ಏಕೆಂದರೆ ಒಂದು ಪಂದ್ಯದಲ್ಲಿ 400 ರನ್ ಬಾರಿಸಿದರೆ ಮುಂದಿನ ಪಂದ್ಯದಲ್ಲಿ 100 ಒಳಗಡೆ ಗಂಟು ಮೂಟೆಕಟ್ಟುತ್ತದೆ. ಸ್ಥಿರತೆಯ ಸಮಸ್ಯೆ ಎದ್ದು ಕಾಣುತ್ತಿದೆ” ಎಂದರು.
ಇದನ್ನೂ ಓದಿ ICC World Cup 2023: ಬಾಬರ್ಗೆ ಮತ್ತೆ ಬೆಂಬಲ ಸೂಚಿಸಿದ ಗಂಭೀರ್; ನರಿ ಬುದ್ಧಿ ಎಂದ ನೆಟ್ಟಿಗರು
ವಿವಾದಾತ್ಮಕ ಹೇಳಿಕೆ ನೀಡಿದ್ದ ಝಾಕಾ ಅಶ್ರಫ್
ಲಾಹೋರ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಭಾರತವನ್ನು ಶತ್ರು ರಾಷ್ಟ್ರ ಎಂದು ಉಲ್ಲೇಖಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಶುಕ್ರವಾರ ರಾತ್ರಿ ಪಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು ತಮ್ಮ ಹೇಳಿಕೆಗಳು ತಪ್ಪು ಗ್ರಹಿಕೆ ಎಂದ್ದರು. ಭಾರತ ಕೇವಲ ಪ್ರತಿಸ್ಪರ್ಧಿ ಎಂಬುದಾಗಿ ಹೇಳಿದ್ದರು.
“ಪಾಕಿಸ್ತಾನ ಮತ್ತು ಭಾರತದ ನಡುವಿನ ಕ್ರಿಕೆಟ್ ಯಾವಾಗಲೂ ಜಾಗತಿಕ ಗಮನದ ಕೇಂದ್ರವಾಗಿದೆ. ಅದಕ್ಕಾಗಿಯೇ ಉಭಯ ದೇಶಗಳ ನಡುವಿನ ಕ್ರಿಕೆಟ್ ಇತರ ಕ್ರೀಡೆಗಳ ಸ್ಪರ್ಧೆಗಿಂತ ಹೆಚ್ಚು ಮಹತ್ವದ್ದಾಗಿದೆ” ಎಂದು ಹೇಳಿದ್ದರು.
ವಿಶ್ವಕಪ್ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ,ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಜಸ್ಪ್ರೀತ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್.
ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಶದಾಬ್ ಖಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ.