ಮುಂಬಯಿ: 2023 ರ ಏಕದಿನ ವಿಶ್ವಕಪ್ (World Cup 2023) ಟ್ರೋಫಿಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿಸಿಸಿಐ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅಂತೆಯೇ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಿದ್ದು ಅದರ ದಿನಾಂಕವನ್ನು ಖಚಿತಪಡಿಸಿದೆ. ಸೆಪ್ಟೆಂಬರ್ 17 ರಂದು ಕೊನೆಗೊಳ್ಳುವ ಏಷ್ಯಾ ಕಪ್ ನಂತರ 50 ಓವರ್ಗಳು ಟೂರ್ನಿಯ ಬಳಿಕ ಈ ಸರಣಿ ನಡೆಯಲಿದೆ. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಆಗಸ್ಟ್ ಅಂತ್ಯದ ವೇಳೆಗೆ ಮಾಧ್ಯಮ ಹಕ್ಕುಗಳನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿ ವೇಳೆಯೇ ಹೊಸ ನೇರ ಪ್ರಸಾರದ ಹಕ್ಕು ಕೂಡ ವಿತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಹೊರಬರಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಮಾಧ್ಯಮ ಹಕ್ಕುಗಳ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಹೇಳಿದ್ದಾರೆ.
ಸೆಪ್ಟೆಂಬರ್ 17 ರಂದು ಕೊನೆಗೊಳ್ಳಲಿರುವ ಏಷ್ಯಾ ಕಪ್ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ನಡೆಯಲಿದೆ. ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಮುಂಚಿತವಾಗಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುವುದು. ವಿಶ್ವಕಪ್ಗೆ ಮುಂಚಿತವಾಗಿ ಪ್ಲೇಯಿಂಗ್ ಇಲೆವೆನ್ ಅನ್ನು ಉತ್ತಮಗೊಳಿಸುವ ಗುರಿ ಹೊಂದಿರುವ ಭಾರತಕ್ಕೆ ಈ ಪಂದ್ಯಗಳು ನಿರ್ಣಾಯಕವಾಗಿವೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ.
ಪಂದ್ಯಕ್ಕೆ ಮುಂಚಿತವಾಗಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಅದರಲ್ಲಿ ಟೀಮ್ ಇಂಡಿಯಾವನ್ನು ರಚಿಸಲು ಅವಕಾಶ ಸಿಗುತ್ತದೆ, ಭಾರತದ ಪಿಚ್ಗಳು ವೇಗಿಗಳಿಗಿಂತ ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯ ಮಾಡುತ್ತಿರುವುದರಿಂದ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಚಾಹಲ್ ಮತ್ತು ಕುಲದೀಪ್ ಯಾದವ್ ಅವರಂಥ ಬೌಲರ್ಗಳಿಗೆ ಹೆಚ್ಚು ಅವಕಾಶ ಸಿಗಲಿದೆ.
ಭಾರತ-ಆಸ್ಟ್ರೇಲಿಯಾ ಮುಖಾಮುಖಿ ದಾಖಲೆ
ಆಸ್ಟ್ರೇಲಿಯಾ ವಿರುದ್ಧ ಭಾರತ 146 ಏಕದಿನ ಪಂದ್ಯಗಳನ್ನಾಡಿದೆ. 82 ಪಂದ್ಯಗಳನ್ನು ಗೆದ್ದಿರುವ ಆಸ್ಟ್ತೇಲಿಯಾ ಮೇಲುಗೈ ಸಾಧಿಸಿದರೆ, ಭಾರತ 54 ಪಂದ್ಯಗಳನ್ನು ಗೆದ್ದಿದೆ. ಮಾರ್ಚ್ 2023 ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾದಾಗ, ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿತ್ತು. ಮುಂದಿನ ಏಕದಿನ ಸರಣಿಯಲ್ಲಿ ಈ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ ಭಾರತ.
ಪಾಕಿಸ್ತಾನ ತಂಡಕ್ಕೆ ಭರ್ಜರಿ ಭದ್ರತೆ
ಜೂನ್ 27 ರಂದು ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು (WorldCup 2023) ಪ್ರಕಟಿಸಲಾಗಿದೆ. 13ನೇ ಆವೃತ್ತಿಯ ವಿಶ್ವ ಕಪ್ ಟೂರ್ನಿಯಲ್ಲಿ 48 ಪಂದ್ಯಗಳಿಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಪಂದ್ಯಗಳನ್ನು ಆಡಿಸಲು ಬಿಸಿಸಿಐ ಮತ್ತು ಐಸಿಸಿ 10 ಸ್ಥಳಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ ಪಾಕಿಸ್ತಾನ ತಂಡಕ್ಕೆ ಐದು ತಾಣಗಳಲ್ಲಿ ಮಾತ್ರ ಪಂದ್ಯ ನಿಗದಿ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಕೊಲ್ಕೊತಾಗಳಲ್ಲಿ ಪಾಕ್ಗೆ ಪಂದ್ಯಗಳನ್ನು ನಿಯೋಜಿಸಲಾಗಿದೆ. ಇದೀಗ ಕೋಲ್ಕೊತಾ ಕ್ರಿಕೆಟ್ ಸಂಸ್ಥೆಯು ಪಾಕಿಸ್ತಾನಕ್ಕೆ ಭರವಸೆ ನೀಡಿದ್ದು ಆಟಗಾರರಿಗೆ ಎಲ್ಲ ರೀತಿಯ ಭದ್ರತೆಗಳನ್ನು ಒದಗಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಬಿಗಿ ಭದ್ರತಾ ವ್ಯವಸ್ಥೆಗಳ ಭರವಸೆ ಕೊಟ್ಟಿದ್ದಾರೆ.
ನಾವು 2016ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದೇವೆ. ಅಂತೆಯೇ ಮುಂದಿನ ವಿಶ್ವ ಕಪ್ನಲ್ಲಿ ಪಾಕ್ ತಂಡದ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದೇವೆ. ಈ ಪಂದ್ಯಗಳನ್ನು ಆಯೋಜಿಸುವುದು ಕಠಿಣವಾಗಿವೆ. ವಿಶ್ವಕಪ್ ಆಯೋಜಿಸುವುದು ಸವಾಲಿನ ಕೆಲಸ. ನಾವು ಯಾವುದೇ ರೀತಿಯ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಸಿಎಬಿ ಅಧ್ಯಕ್ಷರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಕೋಲ್ಕತಾ ಮತ್ತು ಚೆನ್ನೈನಲ್ಲಿ ತಮ್ಮ ಪಂದ್ಯಗಳನ್ನು ಆಡಿಸುವಂತೆ ಪಾಕಿಸ್ತಾನವು ಐಸಿಸಿ ಮತ್ತು ಬಿಸಿಸಿಐಗೆ ಮನವಿ ಮಾಡಿತ್ತು, ಈಡನ್ ಗಾರ್ಡನ್ಸ್ ನಲ್ಲಿ ಎರಡು ಪಂದ್ಯಗಳನ್ನು ಆಡಲಿದ್ದು, ಒಂದು ಬಾಂಗ್ಲಾದೇಶದ ವಿರುದ್ಧ ಮತ್ತು ಇನ್ನೊಂದು ಇಂಗ್ಲೆಂಡ್ ವಿರುದ್ಧ ಆಡಲಿರುವುದರಿಂದ ಪಿಸಿಬಿಯ ನಿರೀಕ್ಷೆ ಈಡೇರಿದೆ. ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಅವರು ಬಾಬರ್ ಅಜಮ್ ಬಳಗಕ್ಕೆ ಉತ್ತಮ ಆತಿಥ್ಯ ಕೊಡುವ ವಿಶ್ವಾಸ ಹೊಂದಿದ್ದಾರೆ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡುವುದಾಗಿಯೂ ಹೇಳಿದ್ದಾರೆ.