ಹೊಸದಿಲ್ಲಿ : ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ (AIFF Election) ಚುನಾವಣೆ ಸೆಪ್ಟೆಂಬರ್ ೨ರಂದು ನಡೆಯಲಿದ್ದು, ಗುರುವಾರದಿಂದ ಶನಿವಾರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಸುಪ್ರೀಮ್ ಕೋರ್ಟ್ ಸೋಮವಾರ ಎಐಎಫ್‌ಎಫ್ ಮೇಲ್ವಿಚಾರಣೆಗಾಗಿ ರಚಿಸಲಾಗಿದ್ದ ಆಡಳಿತಾತ್ಮಕ ಸಮಿತಿ (Committee of administration) ಅಧಿಕಾರವನ್ನು ಮೊಟಕುಗೊಳಿಸಿತ್ತು. ಅಂತೆಯೇ ಹಂಗಾಮಿ ಕಾರ್ಯದರ್ಶಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿತ್ತು. ಜತೆಗೆ ಆಡಳಿತಾತ್ಮಕ ಸಮಿತಿ ನಿರ್ಧರಿಸಿರುವ ದಿನಾಂಕ ಅಂದರೆ ಆಗಸ್ಟ್ ೨೮ರಿಂದ ಚುನಾವಣೆಯನ್ನು ಒಂದು ವಾರ ಮುಂದೂಡಿಕೆ ಮಾಡಲು ಹೇಳಿತ್ತು.
ಸುಪ್ರೀಮ್ ಕೋರ್ಟ್ ಸೂಚನೆಯಂತೆ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಚುನಾವಣೆಗೆ ಹೊಸ ದಿನಾಂಕ ಪ್ರಕಟಿಸಿದ್ದಾರೆ. ಜತೆಗೆ ನಾಮಪತ್ರ ಸಲ್ಲಿಕೆಯ ದಿನವನ್ನೂ ಮುಂದೂಡಿದ್ದಾರೆ. ಈ ಹಿಂದೆ ಆಗಸ್ಟ್f ೧೯ ಕೊನೇ ದಿನಾಂಕವಾಗಿತ್ತು. ಇದೀಗ ಗುರುವಾರದಿಂದ ಶನಿವಾರ ತನಕ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದ್ದು, ಆಗಸ್ಟ್ ೨೮ರಂದು ನಾಮಪತ್ರದ ಪರಿಶೀಲನೆ ನಡೆಯಲಿದೆ. ಆಗಸ್ಟ್ ೨೯ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ೩೦ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ರಚನೆಯಾಗಲಿದೆ.
ನವ ದೆಹಲಿಯ ಕಚೇರಿಯಲ್ಲಿ ಸಪ್ಟೆಂಬರ್ ೨ರಂದು ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿ ಸೂಚನೆ ಮೇರೆಗೆ ೩ ಅಥವಾ ೪ರಂದು ಫಲಿತಾಂಶ ಪ್ರಕಟವಾಗಬಹುದು.
ಫುಟ್ಬಾಲ್ ವಿಶ್ವ ಒಕ್ಕೂಟದ (ಫಿಫಾ)ನಿಷೇಧಕ್ಕೆ ಒಳಗಾಗದ ಹಿನ್ನೆಲೆಯಲ್ಲಿ, ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಕೆಲವು ದಿನಗಳ ದಿನದಿಂದ ಭಾರೀ ಸುದ್ದಿಯಲ್ಲಿದೆ. ಆಡಳಿತಾತ್ಮಕ ಸಮಿತಿಯನ್ನು ಉಲ್ಲೇಖಿಸಿ ಎಐಎಫ್‌ಎಫ್ ಆಡಳಿತದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗುತ್ತಿದೆ ಎಂದು ಹೇಳಿ ಫಿಫಾ ನಿಷೇಧ ಹೇರಿತ್ತು. ಅಲ್ಲದೇ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ೧೭ರ ವಯೋಮಿತಿಯ ಮಹಿಳೆಯ ವಿಶ್ವ ಕಪ್ ಆತಿಥ್ಯವನ್ನು ತಡೆ ಹಿಡಿದಿತ್ತು. ಕೇಂದ್ರ ಕ್ರೀಡಾ ಸಚಿವಾಲಯ, ಏಷ್ಯನ್ ಫುಟ್ಬಾಲ್ ಒಕ್ಕೂಟ ಹಾಗೂ ಫಿಫಾದ ಮಾತುಕಗೆ ಬಳಿಕ ಸಮಸ್ಯೆ ಬಗೆಹರಿಸುವ ಕಡೆಗೆ ಗಮನ ಹರಿಸಲಾಗಿದೆ. ಬಳಿಕ ಕೇಂದ್ರ ಸರಕಾರ ಮನವಿ ಮಾಡಿದ ಪ್ರಕಾರ ಸುಪ್ರೀಮ್ ಕೋರ್ಟ್ ಹೊಸ ಆದೇಶ ಹೊರಡಿಸಿ ಆಡಳಿತಾತ್ಮಕ ಸಮಿತಿಯ ಅಧಿಕಾರ ಮೊಟಕುಗೊಳಿಸಿತ್ತು.
ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್