ಮುಂಬಯಿ: ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ಕೈಬಿಟ್ಟು ಮುಂಬರುವ ವೆಸ್ಟ್ ಇಂಡೀಸ್ (INDvsWI 2023) ಪ್ರವಾಸದ ಎರಡು ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಜುಲೈ 20 ರಿಂದ ಆರಂಭವಾಗಲಿದ್ದು, ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆಯೋಜನೆಗೊಂಡಿದೆ. ಅಚ್ಚರಿಯೆಂದರೆ ಈ ಟೂರ್ನಿಗೆ ಭಾರತ ತಂಡದ ಉಪನಾಯಕರನ್ನಾಗಿ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಕಳದ 15 ತಿಂಗಳು ತಂಡದಲ್ಲಿ ಅವಕಾಶವನ್ನೇ ನೀಡದ ಆಟಗಾರನಿಗೆ ಉಪನಾಯಕನ ಪಟ್ಟ ಕಟ್ಟುವ ಮೂಲಕ ಬಿಸಿಸಿಐ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಪೂಜಾರ ಅವರ ಅನುಪಸ್ಥಿತಿಯಿಂದಾಗಿ ಭಾರತ ತಂಡಕ್ಕೆ ಹೊಸ ಮೂರನೇ ಕ್ರಮಾಂಕದ ಆಟಗಾರನನ್ನು ಹೆಸರಿಸಬೇಕಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದು ಅವರಲ್ಲಿ ಒಬ್ಬರು ಆಯ್ಕೆಯಾಗಬಹುದು. ಅದರಲ್ಲೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಹೊಂದಿರುವ ದಾಖಲೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಪ್ರೇರಣೆ ನೀಡಬಹುದು.
ಪೂಜಾರ ಅವರ ಸ್ಥಾನಕ್ಕೆ ಹೊಸ ಟೆಸ್ಟ್ ಉಪನಾಯಕನ ನೇಮಕವೂ ಅಗತ್ಯವಾಗಿತ್ತು ಆಯ್ಕೆಗಾರರು ಶುಭ್‌ಮನ್ ಗಿಲ್‌ಗೆ ಅವಕಾಶ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದ್ದರೂ ಅಂತಿಮವಾಗಿ ಅಜಿಂಕ್ಯ ರಹಾನೆಗೆ ಪಟ್ಟ ಕಟ್ಟಿದ್ದಾರೆ. 2022 ರ ಆರಂಭದಲ್ಲಿ ತಂಡದಿಂದ ಕೈಬಿಡಲ್ಪಟ್ಟ ರಹಾನೆ ಪ್ರಥಮ ದರ್ಜೆ ಕ್ರಿಕೆಟ್, ಐಪಿಎಲ್ ಹಾಗೂ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಅವನ್ನು ತಂಡಕ್ಕೆ ಆಯ್ಕೆ ಮಾಡುವ ಜತೆಗೆ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : INDvsWI 2023 : ವಿಂಡೀಸ್ ಪ್ರವಾಸಕ್ಕೆ ಟೆಸ್ಟ್, ಏಕದಿನ ತಂಡ ಪ್ರಕಟ; ಯಾರಿಗೆಲ್ಲ ಸಿಕ್ತು ಚಾನ್ಸ್?
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ರಹಾನೆ ಮೊದಲ ಇನಿಂಗ್ಸ್‌ನಲ್ಲಿ ಭಾರತದ ಅತ್ಯಧಿಕ ಸ್ಕೋರರ್ ಎನಿಸಿಕೊಂಡಿದ್ದರು. ಅವರು 129 ಎಸೆತಗಳಲ್ಲಿ 89 ರನ್ ಗಳಿಸಿ ತಂಡದ ಮರ್ಯಾದೆ ಕಾಪಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ರಹಾನೆ 108 ಎಸೆತಗಳಲ್ಲಿ 46 ರನ್ ಪೇರಿಸಿದ್ದರು. 5ನೇ ದಿನದ ಮೊದಲ ಸೆಷನ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ದಿಕ್ಕಾಪಾಲಾಗುವ ಮೂದಲು ರಹಾನೆ ಉತ್ತಮ ಪ್ರದರ್ಶನ ನೀಡಿದ್ದರು.
ರಹಾನೆ ಅವರನ್ನು 2022ರಲ್ಲಿ ತಂಡದಿಂದ ಕೈಬಿಡುವ ಮೊದಲು ಭಾರತದ ಟೆಸ್ಟ್ ಉಪನಾಯಕರಾಗಿದ್ದರು. ಅವರು ಆರು ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು ಕೂಡ. ವಿಶೇವೆಂದರೆ ಅವರು ಮುನ್ನಡೆಸಿದ ಟೆಸ್ಟ್‌ನಲ್ಲಿ ಭಾರತ ಎಂದಿಗೂ ಸೋತಿಲ್ಲ. 2020 – 21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ಭಾರತದ ನಾಯಕರಾಗಿದ್ದರು. ಆ ಸರಣಿಯನ್ನು ಗೆದ್ದು ಭಾರತ ತಂಡ ಇತಿಹಾಸ ನಿರ್ಮಿಸಿತ್ತು.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
ಏಕ ದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.