ಇಂದೋರ್: ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ (INDvsAUS) ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಮೂರನೇ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಿದೆ. ಈ ಪಂದ್ಯ ಡ್ರಾ ಆದರೂ ಸರಣಿ ಭಾರತ ತಂಡಕ್ಕೆ ಒಲಿಯಲಿದೆ. ಏತನ್ಮಧ್ಯೆ, ಭಾರತದ ಪಿಚ್ಗಳು ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವು ನೀಡುತ್ತಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಪೀಟರ್ ಹ್ಯಾಂಡ್ಸ್ಕಾಂಬ್ ಸ್ಪಿನ್ ಬೌಲಿಂಗ್ ಎದುರಿಸಲು ನಾನು ಸಿದ್ಧ ಎಂದು ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಸ್ಪಿನ್ನ್ ಬೌಲಿಂಗ್ಗೆ ಸೆಡ್ಡು ಹೊಡೆಯಲು ಭಾರತ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ತಂತ್ರ ಹೇಳಿಕೊಟ್ಟಿದ್ದಾರೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ಪೀಟರ್ ಹ್ಯಾಂಡ್ಸ್ಕಾಂಬ್ ಮೊದಲ ಟೆಸ್ಟ್ ಪಂದ್ಯದಲ್ಲಿ 31 ಹಾಗೂ 6 ರನ್ ಬಾರಿಸಿದ್ದರು. ಎರಡನೇ ಪಂದ್ಯದಲ್ಲಿ ಅಜೇಯ 71 ರನ್ ಹಾಗೂ ಎರಡನೇ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅಲ್ಲದೆ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಭರವಸೆಯನ್ನೂ ಮೂಡಿಸಿದ್ದಾರೆ. ಇದೇ ವೇಳೆ ಅವರು ಸ್ಪಿನ್ ಬೌಲಿಂಗ್ ಎದುರಿಸುವುದು ಹೇಗೆ ಎಂಬುದನ್ನು ಕಲಿಯುತ್ತಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ಗೆ ತಿಳಿಸಿದ್ದಾರೆ.
2016ನೇ ಆವೃತ್ತಿಯ ಐಪಿಎಲ್ನಲ್ಲಿ ಪೀಟರ್ ಹ್ಯಾಂಡ್ಸ್ಕಾಂಬ್ ರಹಾನೆ ಜತೆ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ವೇಳೆ ರಹಾನೆ ಯಾವ ರೀತಿ ಸ್ಪಿನ್ ಬೌಲಿಂಗ್ ಎದುರಿಸಬೇಕು ಎಂಬ ತಂತ್ರ ಹೇಳಿಕೊಟ್ಟಿದ್ದರು.
ಇದನ್ನೂ ಓದಿ : Ravindra Jadeja : ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ, ಆರ್ ಅಶ್ವಿನ್
ಹಿಮ್ಮಡಿಯ ಸಹಾಯದಿಂದ ಅಜಿಂಕ್ಯ ರಹಾನೆ ಸ್ಪಿನ್ ಬೌಲಿಂಗ್ ಎದುರಿಸುತ್ತಿದ್ದರು. ಅದನ್ನು ನೋಡಿದ ಬಳಿಕ ಆ ತಂತ್ರವನ್ನು ನಾನೂ ಕಲಿಯಬೇಕು ಎಂದು ಅನಿಸಿತು. ಅವರ ಬಳಿ ಕೇಳಿದೆ. ಅವರು ತಂತ್ರವನ್ನು ಬಳಸಿಕೊಂಡು ಬ್ಯಾಟಿಂಗ್ ಮಾಡಲು ಮುಂದಾದೆ ಎಂದೂ ಅವರು ಹೇಳಿದರು.