ನವ ದೆಹಲಿ: ಭಾರತದ ಕ್ರಿಕೆಟ್ ತಂಡದ (Team India) ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ (Ajit Agarkar) ಅವರನ್ನು ಬಿಸಿಸಿಐನ ಪುರುಷರ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಟಿವಿ ಚಾನೆಲ್ ಒಂದರ ಕುಟುಕು ಕಾರ್ಯಾಚರಣೆಯ ವಿವಾದದ ಬಳಿಕ ಚೇತನ್ ಶರ್ಮಾ (Chetan Sharma) ಅವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಲಾಗಿತ್ತು. ಹೀಗಾಗಿ ಕಳೆದ ಫೆಬ್ರವರಿಯಿಂದ ಖಾಲಿ ಇದ್ದ ಈ ಹುದ್ದೆಯನ್ನು 45 ವರ್ಷದ ಅಗರ್ಕರ್ ವಹಿಸಿಕೊಂಡಿದ್ದಾರೆ. ಶಿವ ಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರತೋ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಗೆ ಅಗರ್ಕರ್ ಮುಖ್ಯಸ್ಥರಾಗಿರಲಿದ್ದಾರೆ.
191 ಏಕದಿನ ಮತ್ತು 26 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವಿ ಆಲ್ರೌಂಡರ್ ಅಗರ್ಕರ್ ಅವರನ್ನು ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ನೇಮಕ ಮಾಡಿದೆ. ಒಂಬತ್ತು ವರ್ಷಗಳ ವೃತ್ತಿಜೀವನದಲ್ಲಿ 349 ಅಂತರರಾಷ್ಟ್ರೀಯ ವಿಕೆಟ್ ಪಡೆದಿರುವ ಅಗರ್ಕರ್, ಈ ಹಿಂದೆ ಸೀಮಿತ ಅವಧಿಯ ಕ್ರಿಕೆಟ್ ಆಡಳಿತ ಹುದ್ದೆಯ ಅನುಭವ ಹೊಂದಿದ್ದಾರೆ.. 2017 ರಿಂದ 2019 ರವರೆಗೆ, ಅಗರ್ಕರ್ ಮುಂಬೈ ತಂಡದ ಆಯ್ಕೆದಾರರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅದೇ ರೀತಿ ಕೋಚ್ ರಿಕಿ ಪಾಂಟಿಂಗ್ ಮತ್ತು ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಡೆಲ್ಲಿ ಕ್ಯಾಪಿಟಲ್ಟ್ನ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಐದು ಟಿ 20 ಪಂದ್ಯಗಳಿಗೆ ಭಾರತದ ತಂಡವನ್ನು ಘೋಷಿಸುವುದು ಅವರ ಮೊದಲ ಕಾರ್ಯವಾಗಲಿದೆ. ಕಳೆದ ತಿಂಗಳು ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಘೋಷಿಸಲಾಗಿತ್ತು, ಆದರೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಿರಿಯ ಮತ್ತು ಯುವ ಆಟಗಾರರನ್ನು ಒಳಗೊಂಡ ಟಿ20 ಐ ತಂಡವನ್ನು ಆಯ್ಕೆ ಮಾಡುವುದು ಅವರ ಮುಂದಿರುವ ಸವಾಲಾಗಿದೆ. ಅಗರ್ಕರ್ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ಗೆ ಬಲಿಷ್ಠ ಭಾರತ ತಂಡವನ್ನೂ ಕಟ್ಟಬೇಕಾಗಿದೆ.
🚨 NEWS 🚨: Ajit Agarkar appointed Chairman of Senior Men’s Selection Committee.
— BCCI (@BCCI) July 4, 2023
Details 🔽https://t.co/paprb6eyJC
ಅತ್ಯುತ್ತಮ ಆಟಗಾರರಾಗಿದ್ದ ಅಗರ್ಕರ್ ಅವರನ್ನು ಅವರ ಸಾಧನೆ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. 349 ವಿಕೆಟ್ಗಳನ್ನು ಪಡೆದಿರುವ ಜತೆಗೆ ಅಗರ್ಕರ್ ಅವರು 1997 ಮತ್ತು 2007 ರ ಅವಧಿಯಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. 2000ನೇ ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ಅದೇ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ನಲ್ಲಿ ಅಂತಾರಾಷ್ಟ್ರೀಯ ಶತಕ ಬಾರಿಸಿದ ಹೆಗ್ಗಳಿಕೆ ಅವರದ್ದು.
ಇದನ್ನೂ ಓದಿ : Team India : ಎಮರ್ಜಿಂಗ್ ಟೀಮ್ ಏಷ್ಯಾ ಕಪ್ಗೆ ಭಾರತ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿದೆ ಚಾನ್ಸ್?
ಬೌಲಿಂಗ್ನಲ್ಲಿ ಅಗರ್ಕರ್ ಅವರಿಗಿದ್ದ ನಿಖರತೆ ಉತ್ತಮ ಬೌಲರನ್ನಾಗಿ ಮಾಡಿಸಿತ್ತು. ಆರಂಭದಲ್ಲಿ ಗಂಟೆಗೆ 140 ಕಿ.ಮೀಗಿಂತಲೂ ವೇಗದಲ್ಲಿ ಬೌಲಿಂಗ್ ದಾಳಿ ನಡೆಸುತ್ತಿದ್ದ ಅವರು ಸ್ವಲ್ಪ ಸಮಯದ ಬಳಿ ನಿಧಾನಗೊಳಿಸಿದ್ದರು. 2003 ರಲ್ಲಿ ಅಡಿಲೇಡ್ನಲ್ಲಿ ಆಸೀಸ್ ವಿರುದ್ಧ ಭಾರತದ ಪ್ರಸಿದ್ಧ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅವರು 41 ರನ್ಗಳಿಗೆ 6 ವಿಕೆಟ್ ಉರುಳಿಸಿದ್ದರು.
ಅಗರ್ಕರ್ ಕೇವಲ 23 ಪಂದ್ಯಗಳಲ್ಲಿ 50 ಏಕದಿನ ವಿಕೆಟ್ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು. ಅವರ ದಾಖಲೆಯನ್ನು ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಮುರಿದಿದ್ದರು.