ಮುಂಬಯಿ: ಟೀಮ್ ಇಂಡಿಯಾದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ(Indian chief selector) ಅಜಿತ್ ಅಗರ್ಕರ್(Ajit Agarkar) ಅವರು ವೆಸ್ಟ್ ಇಂಡೀಸ್ಗೆ ತೆರಳಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ತಂಡವನ್ನು ಭೇಟಿ ಮಾಡಲಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥರಾದ ಬಳಿಕ ಅಗರ್ಕರ್ ಅವರ ಮೊದಲ ಭೇಟಿ ಇದಾಗಿದೆ. ಈ ಭೇಟಿಯ ವೇಳೆ ನಾಯಕ ರೋಹಿತ್ ಶರ್ಮ(Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್(Rahul Dravid) ಜತೆ ಏಕದಿನ ವಿಶ್ವಕಪ್(ICC World Cup) ಕುರಿತ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಜಿತ್ ಅಗರ್ಕರ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗುವ ಮುನ್ನವೇ ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಂಡಿತ್ತು. ಹೀಗಾಗಿ ಅವರಿಗೆ ತಂಡವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅಗರ್ಕರ್ ಅವರೇ ತಂಡದ ಭೇಟಿಗಾಗಿ ವಿಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ಅಗರ್ಕರ್ ಅವರು ವಿಂಡೀಸ್ನಲ್ಲಿ ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಜತೆ ಏಷ್ಯಾ ಕಪ್ ಮತ್ತು ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವಕಪ್ ಕುರಿತು ವಿಶೇಷ ಸಭೆ ನಡೆಸಿ ಚರ್ಚಿಸಲಿದ್ದಾರೆ. ತಂಡ ಸಂಯೋಜನೆ ಮತ್ತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜತೆಗೆ ಗಾಯಾಳುಗಳಾಗಿ ತಂಡದಿಂದ ಹೊರಗುಳಿದಿರುವ ಆಟಗಾರರ ಆಯ್ಕೆ ಪ್ರತಿಕೆಯ ಬಗ್ಗೆಯೂ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ Team India : ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ
ಮೂಲಗಳ ಪ್ರಕಾರ ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯು ಫಿಟ್‌ನೆಸ್ ಸಮಸ್ಯೆಗಳು ಮತ್ತು ಕೆಲಸದ ಹೊರೆ ನಿರ್ವಹಣೆ, ವಿಶ್ವಕಪ್ಗೆ ಪ್ರಮುಖ 20 ಆಟಗಾರರ ಆಯ್ಕೆ ಈ ಎಲ್ಲ ವಿಚಾರದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಭವಿಷ್ಯದ ಟೆಸ್ಟ್ ಮತ್ತು ಟಿ20 ತಂಡಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರ ತನಕ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8ರಂದು ಚೆನ್ನೈಯಲ್ಲಿ ನಡೆಯಲಿದೆ.
ಟಿವಿ ಚಾನೆಲ್ ಒಂದರ ಕುಟುಕು ಕಾರ್ಯಾಚರಣೆಯ ವಿವಾದದ ಬಳಿಕ ಚೇತನ್ ಶರ್ಮಾ (Chetan Sharma) ಅವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಲಾಗಿತ್ತು. ಹೀಗಾಗಿ ಕಳೆದ ಫೆಬ್ರವರಿಯಿಂದ ಖಾಲಿ ಇದ್ದ ಈ ಹುದ್ದೆಯನ್ನು 45 ವರ್ಷದ ಅಗರ್ಕರ್ ವಹಿಸಿಕೊಂಡಿದ್ದಾರೆ. ಶಿವ ಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರತೋ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಗೆ ಅಗರ್ಕರ್ ಮುಖ್ಯಸ್ಥರಾಗಿದ್ದಾರೆ.
191 ಏಕದಿನ ಮತ್ತು 26 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವಿ ಆಲ್ರೌಂಡರ್ ಅಗರ್ಕರ್ ಅವರನ್ನು ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಜುಲೈ ಮೊದಲ ವಾರದಲ್ಲಿ ನೇಮಕ ಮಾಡಿತ್ತು.