ದುಬೈ: ಪಾಕಿಸ್ತಾನದ ಅಲೀಂ ದಾರ್(Aleem Dar) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಎಲೈಟ್ ಪ್ಯಾನಲ್ನಿಂದ ನಿವೃತ್ತಿ ಹೊಂದಿದ್ದಾರೆ. ಅವರ ಸ್ಥಾನಕ್ಕೆ ಪಾಕಿಸ್ತಾನದವರೇ ಆದ ಎಹಸಾನ್ ರಾಜಾ(Ahsan Raza) ನೇಮಕವಾಗಿದ್ದಾರೆ. ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಸುದೀರ್ಘ ಕಾಲದಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಸಾಧನೆ ಅವರದ್ದಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ದಾರ್ ಹೆಸರಿನಲ್ಲಿದೆ. 144 ಟೆಸ್ಟ್, 222 ಏಕ ದಿನ ಹಾಗೂ 69 ಟಿ20 ಪಂದ್ಯಗಳಲ್ಲಿ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
58 ವರ್ಷದ ಅಲೀಂ ದಾರ್ ಅವರು ವಿದಾಯ ಹೇಳಿದ ವಿಚಾರವನ್ನು ಐಸಿಸಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ‘ಅಂಪೈರ್ ಅಲೀಂ ದಾರ್ ಅವರು ಎಲೈಟ್ ಅಂಪೈರ್ ಆಗಿ 19 ವರ್ಷಗಳ ದೀರ್ಘ ಕಾರ್ಯನಿರ್ವಹಣೆಯ ಬಳಿಕ ವಿದಾಯ ಹೇಳಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಒಟ್ಟು 435 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅವರ ಮುಂದಿನ ಜೀವನಕ್ಕೆ ಶುಭಹಾರೈಕೆಗಳು” ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ IND VS AUS: ಮೊದಲ ಏಕದಿನ; ರಾಹುಲ್ಗೆ ಅವಕಾಶ
“ಸುದೀರ್ಘ 19 ವರ್ಷಗಳ ಕಾಲ ಐಸಿಸಿ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು ಸಂತಸದ ಜತೆಗೆ ಗೌರವದ ಸಂಕೇತ. ಈ ವೃತ್ತಿಜೀವನದಲ್ಲಿ ವಿಶ್ವದ ಬೇರೆ ಬೇರೆ ತಾಣಗಳಲ್ಲಿ ಕೆಲಸ ಮಾಡಿದ್ದು ಖುಷಿ ಇದೆ” ಎಂದು ಅಲೀಂ ದಾರ್ ಹೇಳಿದ್ದಾರೆ.