ಲಂಡನ್: ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಅಲೆಕ್ಸ್ ಹೇಲ್ಸ್ ದಿಢೀರ್(Alex Hales Retirement) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅವರ ಈ ನಿವೃತ್ತಿ ನಿರ್ಧಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ(england and wales cricket board) ಅಚ್ಚರಿ ತಂದಿದೆ.
ಟ್ವಿಟರ್ನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ಅಲೆಕ್ಸ್ ಹೇಲ್ಸ್(Alex Hales), ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಕ್ರಿಕೆಟ್ ಪ್ರಯಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ. ನಿವೃತ್ತಿ ಜೀವನವನ್ನು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಕಳೆಯಲು ನಿರ್ಧರಿಸಿದ್ದೇನೆ’ ಎಂದು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್(t20 World cup 2022) ಗೆದ್ದ ಆಂಗ್ಲರ ತಂಡದ ಸದಸ್ಯರಾಗಿದ್ದ ಅಲೆಕ್ಸ್ ಹೇಲ್ಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತದ ಫೈನಲ್ ಕನಸಿಗೆ ಕೊಳ್ಳಿ ಇಟ್ಟಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಅವರು ಕೇವಲ 47 ಎಸೆತಗಳಲ್ಲಿ ಅಜೇಯ 86 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದುಕೊಂಡಿದ್ದರು. ಏಕದಿನ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆಯುವ ಹಂತದಲ್ಲಿ ಅವರು ಕ್ರಿಕೆಟ್ಗೆ ಗುಡ್ ಬೈ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಪುರುಷರ ‘ದಿ ಹಂಡ್ರೆಡ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡದ ಪರ ಆಡುತ್ತಿದ್ದಾರೆ.
ಇದನ್ನೂ ಓದಿ T20 Blast: ವಿಶ್ವಕಪ್ಗೂ ಮುನ್ನ ಒಂದೇ ಓವರ್ನಲ್ಲಿ 4 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದ ಅಫ್ರಿದಿ
ವಿವಾದಕ್ಕೂ ಕಡಿಮೆ ಇಲ್ಲ
2019ರಲ್ಲಿ ಬ್ರಿಸ್ಟಲ್‌ನ ನೈಟ್‌ಕ್ಲಬ್ ಹೊರಗೆ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಹೇಲ್ಸ್ಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಮಾದಕ ವಸ್ತು ಸೇವನೆಗಾಗಿ ಅವರಿಗೆ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ 2019ರ ಏಕ ದಿನ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಕೈತಪ್ಪಿ ಹೋಗಿತ್ತು.
34 ವರ್ಷದ ಅಲೆಕ್ಸ್ ಹೇಲ್ಸ್ 2011ರ ಆಗಸ್ಟ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೂರು ಸ್ವರೂಪಗಳಲ್ಲಿ ಒಟ್ಟು 156 ಪಂದ್ಯಗಳನ್ನು ಆಡಿರುವ ಅವರು ಏಳು ಶತಕಗಳ ಸಹಾಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 5000 ಕ್ಕೂ ಅಧಿಕ ರನ್ ಗಳಿಸಿದ್ದಾರೆ.