ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್(All England Badminton) ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಕಾಣುವ ಮೂಲಕ ಭಾರತದ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು(pv sindhu) ಹೊರಬಿದ್ದಿದ್ದಾರೆ.
ಬುಧವಾರ(ಮಾರ್ಚ್ 15) ರಾತ್ರಿ ನಡೆದ ವನಿತಾ ಸಿಂಗಲ್ಸ್ ವಿಭಾಗದ ಮುಖಾಮುಖಿಯಲ್ಲಿ ಪಿ.ವಿ. ಸಿಂಧು ಅವರನ್ನು ಚೀನದ ಜಾಂಗ್ ಯಿ ಮಾನ್ 21-17, 21-11 ಅಂತರದಿಂದ ಮಣಿಸಿದರು. ಉಭಯ ಆಟಗಾರ್ತಿಯರ ಈ ಕಾಳಗ ಕೇವಲ 39 ನಿಮಿಷದಲ್ಲಿ ಅಂತ್ಯಕಂಡಿತು. ಈ ಸೋಲಿನಿಂದಿಗೆ ಸಿಂಧು ಅವರು ಈ ವರ್ಷ ಆಡಿದ ಪ್ರಮುಖ ಟೂರ್ನಿಗಳಲ್ಲಿ ಮೂರನೇ ಬಾರಿಗೆ ಮೊದಲ ಸುತ್ತಿನಲ್ಲೇ ಸೋಲು ಕಂಡ ಸಂಕಟಕ್ಕೆ ಸಿಲುಕಿದರು.
ಇದನ್ನೂ ಓದಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್; ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್ ಗೆಲುವಿನ ಶುಭಾರಂಭ
ಸಿಂಧು ಸೋಲು ಕಂಡರೂ ದಿನದ ಮತ್ತೊಂದು ಮಹಿಳಾ ಡಬಲ್ಸ್‌ನಲ್ಲಿ ಭಾರತದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಗೆಲುವಿನ ಆರಂಭ ಪಡೆದರು. ಈ ಜೋಡಿ ಥಾಯ್ಲೆಂಡ್‌ನ ಕಿಟಿತಾರಾಕುಲ್-ರವಿಂಡಾ ವಿರುದ್ಧ 21-18, 21-14 ಅಂತರದ ಜಯ ಸಾಧಿಸಿದರು. ಇಂದು(ಗುರುವಾರ ಮಾರ್ಚ್ 16) ನಡೆಯುವ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್(Srikanth Kidambi), ಎಚ್.ಎಸ್. ಪ್ರಣಯ್ ಮತ್ತು ಲಕ್ಷ್ಯ ಸೇನ್(lakshya sen) ಕಣಕ್ಕಿಳಿಯಲಿದ್ದಾರೆ.