ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್(All England Badminton) ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್(Lakshya Sen) ಅವರು ಸೋಲು ಕಂಡಿದ್ದಾರೆ. ಆದರೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ತ್ರಿಶಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟು ಪದಕ ಭರವಸೆಯನ್ನು ಮೂಡಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಲಕ್ಷ್ಯ ಅವರು ಡೆನ್ಮಾರ್ಕ್‌ನ ಆ್ಯಂಡರ್ಸನ್ ಆಯಂಟನ್ಸೆನ್ ವಿರುದ್ಧ 13-21, 15-21 ನೇರ ಗೇಮ್ಗಳ ಅಂತರದಿಂದ ಸೋಲು ಕಂಡರು. ಉಭಯ ಆಟಗಾರರ ಈ ಹೋರಾಟ ಕೇವಲ 52 ನಿಮಿಷಗಳಲ್ಲಿ ಕೊನೆಗೊಂಡಿತು.
ಲಕ್ಷ್ಯ ಸೇನ್ ಮಾತ್ರವಲ್ಲದೆ ಎಚ್.ಎಸ್. ಪ್ರಣಯ್, ಕೆ. ಶ್ರೀಕಾಂತ್ ಕೂಡ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಪರ್ಧೆ ಕೊನೆಗೊಂಡಿದೆ. ಇದಕ್ಕೂ ಮುನ್ನ ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ ಪಿ.ವಿ. ಸಿಂಧು ಸೋತು ನಿರಾಸೆ ಅನುಭವಿಸಿದ್ದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ತ್ರಿಶಾ ಜೋಲಿ-ಗಾಯತ್ರಿ ಗೋಪಿಚಂದ್ ಅವರ ಗೆಲುವಿನ ಓಟ ಮುಂದುವರಿದಿದೆ. 16ರ ಘಟ್ಟದ ಪಂದ್ಯದಲ್ಲಿ ಭಾರತದ ಈ ಜೋಡಿ 21-14, 24-22 ರಲ್ಲಿ ಜಪಾನ್‌ನ ಯೂಕಿ ಫುಕುಶಿಮ- ಸಯಾಕ ಹಿರೋಟ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ All England Badminton: ಮೊದಲ ಸುತ್ತಿನಲ್ಲೇ ಸಿಂಧುಗೆ ಸೋಲಿನ ಆಘಾತ
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ. ಈ ಜೋಡಿ ಚೀನಾದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ವಿರುದ್ಧ 10-21, 21-17, 21-19 ರಲ್ಲಿ ಪರಾಭವಗೊಂಡಿತು.