ನವದೆಹಲಿ: ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲಿರುವ ಸಮಿತಿಗೆ ಒಲಿಂಪಿಯನ್, ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.
ಈ ಸಮಿತಿಯಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಮಿಷನ್ ಒಲಿಂಪಿಕ್ ಸೆಲ್ ಸದಸ್ಯೆ ತೃಪ್ತಿ ಮುರ್ಗುಂಡೆ, ಟಿಒಪಿಎಸ್ ಮಾಜಿ ಸಿಇಒ ರಾಜಗೋಪಾಲನ್ ಮತ್ತು ಸಾಯ್(SAI) ಕ್ರೀಡಾ ಸಮಿತಿ ಮಾಜಿ ಕಾರ್ಯಕಾರಿ ನಿರ್ದೇಶಕಿ ರಾಧಿಕಾ ಶ್ರೀಮಾನ್ ಅವರು ಮೇಲ್ವಿಚಾರಣಾ ಸಮಿತಿಯ ಸದ್ಯಸ್ಯರಾಗಿದ್ದಾರೆ.
ಸರ್ಕಾರ ನೇಮಿಸಿದ ಮೇರಿ ಕೋಮ್ ನೇತೃತ್ವದ ಐವರು ಸದಸ್ಯರ ಈ ಸಮಿತಿಯು ಮುಂದಿನ ತಿಂಗಳು ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿನೇಶ್ ಪೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಕಳೆದ ವಾರ 3 ದಿನಗಳ ಕಾಲ ಭಾರತದ ಕುಸ್ತಿ ಫೆಡರೇಷನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಲೈಂಗಿಕ ಕಿರುಕುಲ ನೀಡಿದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ಬೇಡಿಕೆ ಇರಿಸಿದ್ದರು. ಜತೆಗೆ ರಾಷ್ಟ್ರೀಯ ಒಕ್ಕೂಟದ ವ್ಯವಹಾರಗಳನ್ನು ನಡೆಸಲು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ತಮ್ಮ ಧರಣಿಯನ್ನು ಅಂತ್ಯಗೊಳಿಸಿದ್ದರು. ಇದೀಗ ತನಿಖೆ ನಡೆಸಲಿರುವ ಸಮಿತಿಗೆ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.
ಇದನ್ನೂ ಓದಿ | Wrestlers Protest | ಡಬ್ಲ್ಯೂಎಫ್ಐ ಸಹಾಯಕ ಕಾರ್ಯದರ್ಶಿ ಹುದ್ದೆಯಿಂದ ವಿನೋದ್ ತೋಮರ್ ಅಮಾನತು