ದುಬೈ : ಕಳೆದ ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (IND vs PAK) ಪಂದ್ಯದ ವೇಳೆ ಇತ್ತಂಡಗಳ ಆಟಗಾರರು ಜಗಳವೂ ಆಡಲಿಲ್ಲ, ಗುರಾಯಿಸಿಯೂ ಇಲ್ಲ. ಆದರೆ, ಇತ್ತಂಡಗಳೂ ಐಸಿಸಿ ನಿಯಮದ ಪ್ರಕಾರ ದಂಡ ವಿಧಿಸಿಕೊಂಡಿದ್ದಾರೆ. ಯಾಕೆ ಗೊತ್ತೇ? ನಿಗದಿತ ಸಮಯದಲ್ಲಿ ತಮ್ಮ ಪಾಲಿನ ಓವರ್ಗಳನ್ನು ಮುಗಿಸದೇ ಕಾರಣಕ್ಕೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಾಯಕರು ನಿಗದಿತ ಸಮಯದಲ್ಲಿ ತಮ್ಮ ಪಾಲಿನ ಓವರ್ಗಳನ್ನು ಮುಗಿಸಿರಲಿಲ್ಲ. ಹೀಗಾಗಿ ಸಮಯ ಮೀರಿದ ಓವರ್ಗಳಲ್ಲಿ ಫೀಲ್ಡಿಂಗ್ ನಿಯಂತ್ರಣದ ದಂಡವನ್ನು ಮ್ಯಾಚ್ ರೆಫರಿಗಳು ವಿಧಿಸಿದ್ದಾರೆ. ಭಾರತ ತಂಡ ಕೊನೆ ಎರಡು ಓವರ್ಗಳಲ್ಲಿ ದಂಡ ವಿಧಿಸಿಕೊಂಡಿದ್ದರೆ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಕೊನೇ ಮೂರು ಓವರ್ಗಳಿಗೆ ದಂಡ ವಿಧಿಸಿಕೊಂಡಿತ್ತು.
2021ರಲ್ಲಿ ಐಸಿಸಿ ನಿಧಾನಗತಿಯ ಬೌಲಿಂಗ್ ಮಾಡುವ ತಂಡಗಳಿಗೆ ಹೊಸ ಮಾದರಿಯ ದಂಡ ವಿಧಾನವನ್ನು ವಿಧಿಸಿತ್ತು. ಅದಕ್ಕಿಂತ ಮೊದಲು ಕೇವಲ ನಾಯಕನಿಗೆ ಪಂದ್ಯದ ಸಂಭಾವನೆಯಲ್ಲಿ ಕಡಿತ ಮಾಡಲಾಗುತ್ತಿತ್ತು. ಅದಕ್ಕೆ ನಾಯಕರು ಕ್ಯಾರೇ ಮಾಡುತ್ತಿರಲಿಲ್ಲ. ಹೀಗಾಗಿ ಐಸಿಸಿ ಪಂದ್ಯದ ಗತಿಯನ್ನೇ ಬದಲಿಸಲು ಸಾಧ್ಯವಿರುವ ಫೀಲ್ಡರ್ಗಳ ಸಂಖ್ಯೆ ಕಡಿಮೆ ಮಾಡುವ ಹೊಸ ನಿಯಮವನ್ನು ಜಾರಿಗೆ ಮಾಡಿದೆ.
ಉದಾಹರಣೆಗೆ ಟಿ20 ಪಂದ್ಯದಲ್ಲಿ ನಿಗದಿತ 20 ಓವರ್ಗಳನ್ನು 85 ನಿಮಿಷದಲ್ಲಿ ಮುಗಿಸಬೇಕು. ಅಂದರೆ 19ನೇ ಓವರ್ನ ಮೊದಲ ಎಸೆತವನ್ನು ಈ ಸಮಯದೊಳಗೆ ಎಸೆದಿರಬೇಕು. ಒಂದು ವೇಳೆ ಹಾಕದಿದ್ದರೆ ದಂಡ ಆರಂಭವಾಗುತ್ತದೆ. ಸಾಮಾನ್ಯವಾಗಿ ಸ್ಲಾಗ್ ಓವರ್ಗಳಲ್ಲಿ ಬ್ಯಾಟರ್ಗಳು ದೊಡ್ಡ ಹೊಡೆತಗಳಿಗೆ ಮುಂದಾಗುವ ಕಾರಣ ಫೋರ್, ಸಿಕ್ಸರ್ಗಳು ಹೆಚ್ಚಾಗಿ ಹೋಗುತ್ತವೆ. ಇಂಥ ಸಮಯದಲ್ಲಿ ಫೀಲ್ಡಿಂಗ್ ಮಾಡುವ ತಂಡದ ನಾಯಕನಿಗೆ 30 ಯಾರ್ಡ್ ವೃತ್ತದಿಂದ ಹೊರಗೆ ಐವರು ಫೀಲ್ಡರ್ಗಳನ್ನು ನಿಲ್ಲಿಸುವ ಅವಕಾಶ ಇದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಓವರ್ಗಳನ್ನು ಮುಗಿಸದೇ ಹೋದರೆ ಒಬ್ಬರು ಫೀಲ್ಡರ್ 30 ಯಾರ್ಡ್ ಸರ್ಕಲ್ಗಿಂತ ಒಳಗೆ ಬರಬೇಕಾಗುತ್ತದೆ. ಹೊರಗೆ ನಾಲ್ವರು ಮಾತ್ರ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇದರಿಂದ ಬ್ಯಾಟ್ಸ್ಮನ್ಗೆ ಹೆಚ್ಚು ಲಾಭವಾಗುತ್ತದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಅಂತೆಯೇ ಆಗಿದೆ. ಪಾಕಿಸ್ತಾನ ತಂಡಕ್ಕೆ ಕೊನೇ ಮೂರು ಓವರ್ಗಳಲ್ಲಿ ಬೌಂಡರಿ ಲೈನ್ನಲ್ಲಿ ನಾಲ್ವರನ್ನು ನಿಲ್ಲಿಸುವ ಅವಕಾಶ ಇದ್ದ ಕಾರಣ ಭಾರತ ತಂಡಕ್ಕೆ ಕೊನೆ 17 ಎಸೆತಗಳಲ್ಲಿ 32 ರನ್ ಬಾರಿಸಲು ಸಾಧ್ಯವಾಯಿತು. ಅಂತೆಯೇ ಪಾಕಿಸ್ತಾನ ತಂಡವೂ ಭಾರತ ತಂಡಕ್ಕೆ ವಿಧಿಸಲಾದ ದಂಡದ ಲಾಭವನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ| IND vs PAK | ಭಾರತ ತಂಡದ ಗೆಲುವಿಗೆ ಕುಹಕವಾಡಿದ ಪಾಕ್ ಪತ್ರಕರ್ತನ ಚಳಿ ಬಿಡಿಸಿದ ಅಭಿಮಾನಿಗಳು