Site icon Vistara News

Tata Altroz CNG : ಆಲ್ಟ್ರೋಜ್​ ಸಿಎನ್​ಜಿ ಟ್ವಿನ್​ ಸಿಲಿಂಡರ್​ ಬುಕಿಂಗ್​ ಆರಂಭ; ಬೆಲೆ ಎಷ್ಟು?

Tata Altroz CNG, CNG Car Price

#image_title

ಬೆಂಗಳೂರು: ವರ್ಷಾರಂಭದಲ್ಲಿ ಗ್ರೇಟರ್​ ನೊಯ್ಡಾದಲ್ಲಿ ನಡೆದ ಆಟೊ ಎಕ್ಸ್​ಪೋದಲ್ಲಿ ಟಾಟಾ ಮೋಟಾರ್ಸ್​ ತನ್ನ ಪ್ರೀಮಿಯಮ್​ ಹ್ಯಾಚ್​ ಬ್ಯಾಕ್ಸ್​ ಆಲ್ಟ್ರೋಜ್​ನ (Tata Altroz CNG) ಸಿಎನ್​ಜಿ ಆವೃತ್ತಿಯನ್ನು ಪ್ರದರ್ಶಿಸಿತ್ತು. ಆ ಕಾರನ್ನು ಇದೀಗ ಮಾರುಕಟ್ಟೆಗೆ ಇಳಿಸಿದ್ದು ಬುಕಿಂಗ್​ ಆರಂಭಿಸಿದೆ. 2023ರ ಮೇ ತಿಂಗಳಲ್ಲಿ ಇದನ್ನು ಗ್ರಾಹಕರಿಗೆ ನೀಡಲಿದ್ದೇವೆ ಎಂದು ಕಂಪನಿಯು ಹೇಳಿದೆ. ಸದ್ಯಕ್ಕೆ ಕಂಪನಿಯು ಬೆಲೆಯನ್ನು ಹೇಳಿಲ್ಲ. ಆದರೆ, 21 ಸಾವಿರ ರೂಪಾಯಿ ಪಾವತಿ ಮಾಡಿ ಬುಕಿಂಗ್ ಮಾಡುವಂತೆ ಹೇಳಿದೆ.

ಸಿಎನ್‌ಜಿ ಮಾರುಕಟ್ಟೆಯನ್ನು ಕ್ರಾಂತಿಗೊಳಿಸುವ ಸಲುವಾಗಿ ಟಾಟಾ ಮೋಟರ್ಸ್ ಈ ಕಾರನ್ನು ಬಿಡುಗಡೆ ಮಾಡಿದೆ. ಇದು ಭಾರತದ ಪ್ರಪ್ರಥಮ ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದ ಆಲ್ಟ್ರೋಜ್ iCNG ಕಾರು. ಇದರ ಮೂಲಕ ಬೂಟ್ ಸ್ಪೇಸ್​ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಭಾರತದ ಅತ್ಯಂತ ಸುರಕ್ಷಿತ ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಆಲ್ಟ್ರೋಜ್ ಸಿಎನ್​ಜಿ ಅವತಾರದಲ್ಲೂ ಲಭ್ಯವಾಗಿದೆ. ಉಳಿದಂತೆ ಪೆಟ್ರೋಲ್​ ಹಾಗೂ ಡೀಸಲ್ ಕಾರುಗಳು ಕೂಡ ಮಾರುಕಟ್ಟೆಯಲ್ಲಿ ಮುಂದುವರಿಯಲಿದೆ.

ಟಾಟಾ ಸಿಎನ್​ಜಿ ಕಾರು ಎಕ್ಸ್ಇ, ಎಕ್​​ಎಮ್​ ಪ್ಲಸ್​, ಹಾಗೂ ಎಕ್ಸ್​ಜಡ್​ ಪ್ಲಸ್ ವೇರಿಯೆಂಟ್​​ನಲ್ಲಿ ಲಭ್ಯವಿದ್ದು, ಒಪೇರಾ ಬ್ಲೂ, ಡೌನ್‌ಟೌನ್ ರೆಡ್, ಆರ್ಕೇಡ್ ಗ್ರೇ ಮತ್ತು ಅವೆನ್ಯೂ ವೈಟ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆ ನೀಡಲಾಗಿದೆ.

ಆಲ್ಟ್ರೋಜ್​ ಕಾರಿನಲ್ಲಿ 1.2 ಲೀಟರ್​ನ ಪೆಟ್ರೋಲ್​, ಸಿಎನ್​ಜಿ ಎಂಜಿನ್​ ಇದೆ. ಇದು ಟಿಯಾಗೊ ಹಾಗೂ ಟಿಗೋರ್ ಸಿಎನ್​ಜಿಗಿಂತ 4 ಪಿಎಸ್​ ಹೆಚ್ಚುವರಿ ಪವರ್ ಹಾಗೂ 2 ಎನ್​ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು ಐದು ಸ್ಪೀಡ್​ನ ಮ್ಯಾನುಯಲ್ ಗೇರ್​ಬಾಕ್ಸ್​ ಹೊಂದಿದ್ದು ಒಂದು ಕೆಜಿ ಸಿಎನ್​ಜಿಗೆ 25 ಕಿಲೋ ಮೀಟರ್​ ಮೈಲೇಜ್​ ನೀಡುತ್ತದೆ. ಎಂಜಿನ್ ಸ್ಟಾರ್ಟ್​ ಮಾಡುವುದಕ್ಕೆ ಸಿಎನ್​ಜಿಯನ್ನೇ ಬಳಸಿಕೊಳ್ಳುವುದು ಟಾಟಾ ಕಂಪನಿಯ ಸಿಎನ್​ಜಿ ಎಂಜಿನ್​ಗಳ ವಿಶೇಷತೆಯಾಗಿದೆ. ಉಳಿದ ಕಂಪನಿಗಳ ಕಾರುಗಳ ಎಂಜಿನ್ ಪೆಟ್ರೋಲ್​ ಮೂಲಕ ಸ್ಟಾರ್ಟ್​ ಆಗಿ ಬಳಿಕ ಸಿಎನ್​ಜಿಗೆ ಸ್ವಿಚ್​ ಆಗುತ್ತದೆ.

ಎರಡು ಸಿಲಿಂಡರ್​ ಯಾಕೆ

ಎಲ್ಲ ಸಿಎನ್​ಜಿ ಕಾರುಗಳಲ್ಲಿ ಒಂದು ಸಿಎನ್​ಜಿ ಸಿಲಿಂಡರ್​​ಗಳನ್ನು ಇಟ್ಟಿರುತ್ತಾರೆ. ಆದರೆ, ಆಲ್ಟ್ರೋಜ್​ನಲ್ಲಿ ಎರಡು ಸಿಎನ್​ಜಿ ಸಿಲಿಂಡರ್​ಗಳನ್ನು ಇಡಲಾಗಿದೆ. ಇದರ ಮೂಲಕ ಬೂಟ್​ ಸ್ಪೇಸ್​ಗೆ ಹೆಚ್ಚಿರುವಂತೆ ನೋಡಿಕೊಳ್ಳಲಾಗಿದೆ. ಪೆಟ್ರೋಲ್​ ಅಥವಾ ಡೀಸೆಲ್​ ಆಲ್ಟ್ರೋಜ್​ ಕಾರಿನಲ್ಲಿ 345 ಲೀಟರ್ ಬೂಟ್​ ಸ್ಪೇಸ್​ ನೀಡಲಾಗಿದೆ. ಸಿಎನ್​ಜಿಯಲ್ಲಿ 200 ಲೀಟರ್​ ಸ್ಪೇಸ್​ ದೊರೆಯುವ ನಿರೀಕ್ಷೆಯಿದೆ. ಬೂಟ್​ ಸ್ಪೇಸ್​ ಸಿಎನ್​ಜಿ ಕಾರು ಮಾಲೀಕರ ದೊಡ್ಡ ಚಿಂತೆಯಾಗಿತ್ತು. ಟಾಟಾ ಮೋಟಾರ್ಸ್ ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಫೀಚರ್​ಗಳೇನು?

ಸಿಎನ್​ಜಿ ವೇರಿಯೆಂಟ್​ನ ಆಲ್ಟ್ರೋಜ್​ ಏಳು ಇಂಚಿನ ಟಚ್​ ಸ್ಕ್ರೀನ್​ ಸಿಸ್ಟಮ್​ ಹೊಂದಿದೆ. ಕನೆಕ್ಟೆಡ್​ ಕಾರ್​ ಟೆಕ್ನಾಲಜಿ, ಕ್ರೂಸ್ ಕಂಟ್ರೋಲ್​, ಪುಶ್ ಬಟನ್​, ಸ್ಟಾರ್ಟ್​​ ಸ್ಟಾಪ್​ ಪೆಸಿಲಿಟಿ, ಮೂಡ್​ ಲೈಟಿಂಗ್​, ರೈನ್​ ಸೆನ್ಸಿಂಗ್ ವೈಪರ್​, ಡ್ಯುಯಲ್​ ಫ್ರಂಟ್ ಏರ್​ಬ್ಯಾಗ್​ಗಳು, ರಿಯರ್​ ಪಾರ್ಕಿಂಗ್​ ಕ್ಯಾಮೆರಾ ಈ ಕಾರಿನಲ್ಲಿದೆ.

ಬೆಲೆ ಎಷ್ಟಿರಬಹುದು?

ಟಾಟಾ ಆಲ್ಟ್ರೋಜ್​ನ ಪ್ರತಿ ಸ್ಪರ್ಧಿಗಳಾದ ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಜಾ ಕಾರಿನ ಆರಂಭಿಕ ಬೆಲೆ 8.3 ಲಕ್ಷ ರೂಪಾಯಿಯಿಂದ ಆರಂಭಗೊಂಡು 9.5 ಲಕ್ಷ ರೂಪಾಯಿ ತನಕ ಇದೆ. (ಎಕ್ಸ್ ಶೋರೂಮ್​) ಇದಕ್ಕೆ ಹತ್ತಿರದ ಬೆಲೆಯಲ್ಲಿ ಆಲ್ಟ್ರೋಜ್​ ದೊರೆಯಲಿದೆ.

Exit mobile version