ಮುಂಬಯಿ: ಈ ಬಾರಿಯ ಐಪಿಎಲ್ ಟೂರ್ನಿ ವೇಳೆ ಆರ್‌ಸಿಬಿ(RCB) ಮತ್ತು ವಿರಾಟ್ ಕೊಹ್ಲಿ(virat kohli) ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಇದೀಗ ಮತ್ತೊಮ್ಮೆ ಕೊಹ್ಲಿಯನ್ನು ಟೀಕಿಸಿದ್ದಾರೆ. ಐಪಿಎಲ್ ಆಡಿದಂತಲ್ಲ ಇದು ಐಸಿಸಿ ಟೂರ್ನಿ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ಟಿ20 ವಿಶ್ವಕಪ್ ಬಗೆಗಿನ ಚರ್ಚೆಯ ವೇಳೆ ರಾಯುಡು ಅವರು, ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್ ಕಮ್ಮಿ ಮಾಡುಕೊಳ್ಳುವುದು ಸೂಕ್ತ. ಕೊಹ್ಲಿ ತಂಡದಲ್ಲಿರುವ ಪ್ರತಿಯೊಬ್ಬರು ತಮ್ಮಂತೆ ಆಟವಾಡಲು ಬಯಸುತ್ತಾರೆ. ಇದು ಕಷ್ಟಕರವಾಗಿದ್ದು, ತಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಯುಡು ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ವರ್ತನೆಯನ್ನು ನಾವು ಕಂಡಿದ್ದೇವೆ. ಹೀಗಾಗಿ ನೀವು ಬೇರೆಯವರಿಗೆ ಸ್ಟಾಂಡರ್ಡ್ ಪಾಠ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ರಾಯುಡು ಈ ಹಿಂದೆ ತಮ್ಮ ಕಾರಿಗೆ ಅಡ್ಡ ಬಂದ ಕಾರಣಕ್ಕೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ Ambati Rayudu: ವೈಎಸ್ಆರ್ಪಿ ಪಕ್ಷ ತೊರೆದ ಮೂರೇ ದಿನಕ್ಕೆ ಮತ್ತೊಂದು ಪಕ್ಷ ಸೇರಲು ಮುಂದಾದ ಅಂಬಾಟಿ ರಾಯುಡು
ಪ್ಲೇ ಆಫ್ಸ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ಮತ್ತು ತಂಡವನ್ನು ಟೀಕಿಸುತ್ತಾಲೇ ಬಂದಿದಿದ್ದರು.
“ಆರ್‌ಸಿಬಿ ಬೆಂಬಲಿಗರನ್ನು ಕಂಡು ನನ್ನ ಹೃದಯ ಉಕ್ಕುತ್ತಿದೆ. ಹಲವು ವರ್ಷಗಳಿಂದ ಒಂದೇ ಉತ್ಸಾಹ ಮತ್ತು ಪ್ರೀತಿಯಿಂದ ಅವರು ತಮ್ಮ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ವ್ಯಕ್ತಿ ಪೂಜೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಗಿಂತಲೂ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ತಂಡದ ಉದ್ದೇಶ ಆಗಿದ್ದರೆ, ಈಗಾಗಲೇ ತಂಡ ಟ್ರೋಫಿ ಗೆಲ್ಲುತ್ತಿತ್ತು. ಆರ್‌ಸಿಬಿ ಕಳೆದ 17 ಆವೃತ್ತಿಯಲ್ಲಿ ಎಂತಹ ಅದ್ಭುತ ಆಟಗಾರರನ್ನು ಕೈಬಿಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಕ್ಕೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ತರುವಂತೆ ಮ್ಯಾನೇಜ್ಮೆಂಟ್ ಮೇಲೆ ಒತ್ತಡ ಹಾಕಿ. ಮೆಗಾ ಆಕ್ಷನ್ ಮೂಲಕ ತಂಡ ಹೊಸ ಅಧ್ಯಾಯ ಬರೆಯಲಿ” ಎಂದು ರಾಯುಡು ಗೇಲಿ ಮಾಡಿ ಟ್ವೀಟ್ ಮಾಡಿದ್ದರು.
ಭಾರತ ಪರ ಮೂರು ಶತಕ
55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. 2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.