ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸಮ್ಮುಖದಲ್ಲೇ ವೈಎಸ್‌ಆರ್ ಕಾಂಗ್ರೆಸ್(YSRCP Party) ಸೇರಿ ಒಂದು ವಾರದ ಒಳಗೆ ದಿಢೀರ್ ಪಕ್ಷಕ್ಕೆ ಮತ್ತು ರಾಜಕೀಯಕ್ಕೆ ಗುಡ್ ಬೈ ಹೇಳಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.
ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸೇರಿದ್ದ ವಾರದ ಒಳಗೆ ಪಕ್ಷ ತೊರೆದು ಅಚ್ಚರಿ ಮೂಡಿಸಿದ್ದ ರಾಯುಡು ಇದೀಗ ಜನಸೇನಾ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ರಾಯುಡು ಜನಸೇನಾ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ಸೇರ್ಪಡೆಯಾದ ಒಂದೇ ವಾರದಲ್ಲಿ ವೈಎಸ್‌ಆರ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ಕ್ರಿಕೆಟಿಗ ಅಂಬಾಟಿ ರಾಯುಡು
— ATR (@RayuduAmbati) January 10, 2024
ಅಂಬಾಟಿ ರಾಯುಡು ವೈಎಸ್‌ಆರ್ ಕಾಂಗ್ರೆಸ್ ತೊರೆಯಲು ಪ್ರಮುಖ ಕಾರಣ ಟಿಕೆಟ್ ನಿರಾಕರಣೆ ಎನ್ನಲಾಗಿದೆ. ರಾಯುಡು ಗುಂಟೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದಿದ್ದರು. ಆದರೆ, ಜಗನ್ ಟಿಕೆಟ್ ನಿರಾಕರಣೆ ಮಾಡಿದ್ದು, ಹೀಗಾಗಿ ರಾಯುಡು ವೈಎಸ್ಆರ್ಸಿಪಿ ತೊರೆದರು ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ರಾಯುಡು ಯಾವುದೇ ಅಧಿಕೃತ ಹೇಳಿಕೆ ಇದುವರೆಗೆ ನೀಡಿಲ್ಲ. ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಹೇಳುವ ಮೂಲಕ ರಾಜೀನಾಮೆ ಘೋಷಿಸಿದ್ದರು.
This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
— ATR (@RayuduAmbati) January 6, 2024
Thank You.
ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳನ್ನು ಆಡಲು ಅಂಬಾಟಿ ರಾಯುಡು ಅವರಿಗೆ ಅವಕಾಶ ಸಿಗಲಿಲ್ಲ. ತಮಗೆ ಸಿಕ್ಕ ಸಿಮೀತ ಅವಧಿಯಲ್ಲೇ ಅವರು ಗಮನ ಸೆಳೆದಿದ್ದರು. 55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ.
ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದ ರಾಯುಡು
2019ರ ಏಕದಿನ ವಿಶ್ವ ಕಪ್ನಿಂದ ಕೈ ಬಿಟ್ಟ ಬೇಸರಕ್ಕೆ ಬಿಸಿಸಿಐ ವಿರುದ್ಧ ಕೆಂಡಕಾರಿದ್ದ ರಾಯುಡು, ತಕ್ಷಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಜತೆಗೆ ವಿಶ್ವಕಪ್ ಟೂರ್ನಿಯನ್ನು ತ್ರಿಡಿ ಗ್ಲಾಸ್ ಹಾಕಿಕೊಂಡು ವೀಕ್ಷಿಸುವುದಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರನ್ನು ಟೀಕಿಸಿದ್ದರು. ರಾಯುಡು ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದರೂ ಅವರನ್ನು ಬಿಟ್ಟು ವಿಜಯ್ ಶಂಕರ್ಗೆ ಅವಕಾಶ ನೀಡಿದ ಬಗ್ಗೆ ರಾಯುಡು ಈ ಆಕ್ರೋಶ ವ್ಯಕ್ತಪಡಿಸಿದ್ದರು.