Site icon Vistara News

Team India : ಬಿಸಿಸಿಐ ಹೊಸ ನಿಯಮದ ಉರುಳು; ವಿದೇಶಿ ಲೀಗ್​ನಿಂದ ಅಂಬಾಟಿ ಎಸ್ಕೇಪ್​!

Ambati Rayudu

ನವ ದೆಹಲಿ: ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಂಬಾಟಿ ರಾಯುಡು ಇತ್ತೀಚೆಗೆ ತಮ್ಮ ಐಪಿಎಲ್ ವೃತ್ತಿಯನ್ನು ಕೊನೆಗೊಳಿಸಿದ್ದರು. ತಕ್ಷಣವೇ ಅವರು ಉದ್ಘಾಟನಾ ಆವೃತ್ತಿಯ ಮೇಜರ್ ಕ್ರಿಕೆಟ್​ ಲೀಗ್​ ಸೀಸನ್​​ಗಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್​​ನೊಂದಿಗೆ ಒಪ್ಪಂದ ಮಾಡಿದ್ದರು. ಆದರೆ, ಇದೀಗ ಅವರು ಏಕಾಏಕಿ ರಾಯುಡು ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅವರ ನಿರ್ಧಾರಕ್ಕೆ ಬಿಸಿಸಿಐ ನಿಯಮವೇ ಕಾರಣ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಜತೆ ಒಪ್ಪಂದ ಕೊನೆಗೊಳಿಸಿ ವಿದೇಶಿ ಲೀಗ್​ಗಳಲ್ಲಿ ಆಡಲು ಮುಂದಾದವರಿಗೆ ಕಡಿವಾಣ ಹಾಕಲು ಬಿಸಿಸಿಐ ಸಿದ್ದತೆ ನಡೆಸಿಕೊಂಡಿದೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಐಪಿಎಲ್ 2023 ರ ಫೈನಲ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ರಾಯುಡು ಐಪಿಎಲ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ಅವರು ಕೇವಲ ಎಂಟು ಎಸೆತಗಳಲ್ಲಿ 19 ರನ್ ಗಳಿಸುವ ಮೂಲಕ ಸಿಎಸ್​ಕೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.. ಈ ಪ್ರಭಾವಶಾಲಿ ಪ್ರದರ್ಶನವು ಸಿಎಸ್​ಕೆಗೆ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿತ್ತು. ಅಲ್ಲದೆ, ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ರೋಹಿತ್ ಶರ್ಮಾ ಅವರೊಂದಿಗೆ ಈ ಸಾಧನೆಯನ್ನು ಅವರು ಹಂಚಿಕೊಂಡಿದ್ದಾರೆ.

ಇತ್ತೀಚಿನ ಕೆಲವು ದಿನಗಳ ಹಿಂದೆ ಅಂಬಾಟಿ ರಾಯುಡು ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ದಿ ಟೈಮ್ಸ್ ಆಫ್ ಇಂಡಿಯಾದ ವರದಿಗಳ ಪ್ರಕಾರ, ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್​ಪಿಸಿ ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ. 2024 ರ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಮೇಜರ್ ಕ್ರಿಕೆಟ್​ ಲೀಗ್​ನ ಸೀಸನ್1 ರಿಂದ ರಾಯುಡು ಹಿಂದೆ ಸರಿದಿರುವ ಸುದ್ದಿಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿದೇಶಿ ಲೀಗ್​ಗಳಿಗೆ ಹೋಗುವ ಆಟಗಾರಿಗೆ ಕೆಲವೊಂದು ನಿಯಮಗಳನ್ನು ಹೇರುವುದಾಗಿ ಹೇಳಿರುವುದಕ್ಕೂ ಸಂಬಂಧವಿದೆ ಎನ್ನಲಾಗಿದೆ. ಆಟಗಾರರಿಗೆ ನಿವೃತ್ತಿ ಪಡೆದ ಬಳಿಕ ಕೂಲಿಂಗ್ ಆಫ್ ಅವಧಿಯನ್ನು ಪೂರ್ಣಗೊಳಿಸುವ ನಿಯಮ ಹೇರುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಹೊಸ ನಿಯಮದ ಕುಣಿಕೆ ತಮಗೆ ಅನ್ವಯವಾಗುವುದು ಬೇಡ ಎಂದು ರಾಯುಡು ಏಕಾಏಕಿ ನಿರ್ಧಾರ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿದೇಶದಲ್ಲಿ ಲಾಭದಾಯಕ ಟಿ 20 ಲೀಗ್​​ಗಳಲ್ಲಿ ಭಾಗವಹಿಸಲು ಭಾರತೀಯ ಆಟಗಾರರು ಅಕಾಲಿಕವಾಗಿ ನಿವೃತ್ತರಾಗುವುದು ಬಿಸಿಸಿಐ ಚಿಂತೆಗೆ ಕಾರಣವಾಗಿದೆ. ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಪೆಕ್ಸ್ ಕೌನ್ಸಿಲ್ ವಿದೇಶಿ ಲೀಗ್​ಗಳಲ್ಲಿ ನಿವೃತ್ತ ಭಾರತೀಯ ಆಟಗಾರರ ಪಾಲ್ಗೊಳ್ಳುವಿಕೆಯ ಬಗ್ಗೆ ನೀತಿಯನ್ನು ರೂಪಿಸುವ ಕಾರ್ಯವನ್ನು ಮಂಡಳಿಯ ಪದಾಧಿಕಾರಿಗಳಿಗೆ ವಹಿಸಿದೆ.

ಇದನ್ನೂ ಓದಿ :

ಉದ್ದೇಶಿತ ನಿಯಮದ ಬಗ್ಗೆಯೂ ಟೀಕೆಗಳು ವ್ಯಕ್ತಗೊಂಡಿವೆ. ಇದು ಆಟಗಾರರ ವೈಯಕ್ತಿಕ ಹಕ್ಕುಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಅಭಿಮಾನಿಗಳು, ವೀಕ್ಷಕರು ಮತ್ತು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ನಿಯಮದ ಕಾನೂನುಬದ್ಧತೆ ಮತ್ತು ನ್ಯಾಯಸಮ್ಮತತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

Exit mobile version