Site icon Vistara News

IND vs PAK: ಇಂಡೋ-ಪಾಕ್​ ಕದನಕ್ಕೆ ಸಾಕ್ಷಿಯಾಗಲಿದ್ದಾರೆ ಸಿನಿಮಾ ರಂಗದ ದಿಗ್ಗಜರು

Amitabh Bachchan, Rajnikanath, and Tendulkar

ಅಹಮದಾಬಾದ್​: ಅಕ್ಟೋಬರ್​ 14ರಂದು ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಕದನಕ್ಕೆ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಾದ ಬಾಲಿವುಡ್​ನ ಅಮಿತಾಬ್ ಬಚ್ಚನ್(Amitabh Bachchan) ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Rajnikanath) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಕೂಡ ಉಪಸ್ಥಿತರಿರಲಿದ್ದಾರೆ. ಈ ಮೂವರಿಗೂ ಬಿಸಿಸಿಐ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಗೋಲ್ಡನ್​ ಟಿಕೆಟ್(Golden ticket)​ ನೀಡಿ ಗೌರವ ಮತ್ತು ವಿಶೇಷ ಆಹ್ವಾನ ನೀಡಿತ್ತು.

ಅದ್ಧೂರಿ ಕಾರ್ಯಕ್ರಮ

ಪೂರ್ವ ನಿಗದಿಯಂತೆ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮವನ್ನು ಅಕ್ಟೋಬರ್​ 4ರಂದು ನಿಗದಿಪಡಿಸಲಾಗಿತ್ತು. ಆದರೆ ಡಿಢೀರ್​ ಆಗಿ ಬಿಸಿಸಿಐ ಇದನ್ನು ರದ್ದುಗೊಳಿಸಿತ್ತು. ಇದೇ ವೇಳೆ ಈ ಸಮಾರಂಭ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ನಡೆಸಲಾಗುತ್ತದೆ ಎಂದು ಅಂದಾಜಿಸಲಾಗುತ್ತು. ಇದೀಗ ಈ ಊಹೆ ಸರಿಯಾದಂತಿದೆ. ಅಕ್ಟೋಬರ್​ 14ರಂದು ಅದ್ದೂರಿಯಾಗಿ ಉದ್ಘಾಟನ ಸಮಾರಂಭವನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಪಂದ್ಯ ಮಧ್ಯಾಹ್ನ ಆರಂಭವಾಗುವ ಕಾರಣ ಮೊದಲ ಇನಿಂಗ್ಸ್​ ಮುಕ್ತಾಯದ ಬಳಿಕ ಸಿಗುವ ಸಮಯದಲ್ಲಿ ವರ್ಣರಂಜಿತ ಕಾರ್ಯಕ್ರಮ ನಡೆಸಲಾಗುವುದು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಜತೆಯಾಗಿ ಈ ಪಂದ್ಯ ವೀಕ್ಷಿಸಲಿದ್ದಾರೆ. ಗಾಯಕ ಅರ್ಜಿತ್ ಸಿಂಗ್, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್ ಮತ್ತು ಆಶಾ ಭೋಂಸ್ಲೆಯಂತಹ ಪ್ರಸಿದ್ಧ ಬಾಲಿವುಡ್ ಸ್ಟಾರ್ ಗಳನ್ನು ಒಳಗೊಂಡಿರುವ ಈ ಸಮಾರಂಭದಲ್ಲಿ ಪಟಾಕಿ ಮತ್ತು ಲೇಸರ್ ಪ್ರದರ್ಶನವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ ind vs pak : ಪಾಕ್​ ಉಗ್ರರನ್ನು ಹೊಡೆದುರುಳಿಸಿದ ಕಮಾಂಡೊಗಳಿಂದಲೇ ಭಾರತ- ಪಾಕ್​ ಮ್ಯಾಚ್​ಗೆ ಭದ್ರತೆ

ಬ್ಲೂ ಜೆರ್ಸಿಯಲ್ಲೇ ಪಂದ್ಯ

ಟೀಮ್​ ಇಂಡಿಯಾ ಆಟಗಾರರು ಪಾಕ್​ ಪಂದ್ಯದಲ್ಲಿ ಕೇಸರಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಸುದ್ದಿಯನ್ನು ಬಿಸಿಸಿಐ ನಿರಾಕರಿಸಿತ್ತು. “ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಟೀಮ್​ ಇಂಡಿಯಾ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಇದೊಂದು ದಾರಿ ತಪ್ಪಿಸಲು ಕೆಲ ವ್ಯಕ್ತಿಗಳು ಮಾಡಿರುವ ಸಂಚು. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಮ್ಮ ತಂಡ ಮೆನ್ ಇನ್ ಬ್ಲೂನಲ್ಲೇ ಆಡಲಿದೆ” ಎಂದು ಬಿಸಿಸಿಐನ ಗೌರವ ಖಜಾಂಚಿ ಆಶಿಶ್ ಶೆಲಾರ್ ತಿಳಿಸಿದ್ದಾರೆ.

ಕೇಸರಿ ಶಾಲು ಹಾಕಿ ಸ್ವಾಗತ

ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗ ಹೈದಾರಾಬಾದ್​ನಲ್ಲಿ ಪಾಕ್​ ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತ ಕೋರಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಕೆಲವರು ಇದು ಅಮಿತ್​ ಶಾ ಅವರ ಮಗ ಜಯ್​ ಶಾ ಅವರು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂದು ಕೆಲ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.

ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. ಇದಕ್ಕೂ ಮುನ್ನ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್​ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Exit mobile version