Site icon Vistara News

FIFA World Cup | ಮೆಸ್ಸಿಯ ತಂಡಕ್ಕೆ ಆರಂಭದಲ್ಲೇ ಆಘಾತ, ಸೌದಿ ಅರೇಬಿಯಾ ವಿರುದ್ಧ 2-1 ಗೋಲ್‌ಗಳ ಸೋಲು

fifa worldcup

ದೋಹಾ : ಫಿಫಾ ಫುಟ್ಬಾಲ್ ವಿಶ್ವ ಕಪ್‌ನಲ್ಲಿ (FIFA World Cup) ಮಂಗಳವಾರ ಅಚ್ಚರಿಯ ಫಲಿತಾಂಶವೊಂದು ಪ್ರಕಟಗೊಂಡಿದೆ. ಕಳೆದ ಬಾರಿಯ ರನ್ನರ್‌ಅಪ್‌ ಹಾಗೂ ಪ್ರಶಸ್ತಿ ಫೇವರಿಟ್‌ ಎನಿಸಿಕೊಂಡಿದ್ದ ಲಿಯೋನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ ೨-೧ ಗೋಲ್‌ಗಳ ಸೋಲಿಗೆ ಒಳಗಾಗಿದೆ. ಈ ಮೂಲಕ ಬಲಿಷ್ಠ ಅರ್ಜೆಂಟೀನಾ ಪಡೆ ಆರಂಭಿಕ ಆಘಾತಕ್ಕೆ ಒಳಗಾಗುವ ಜತೆಗೆ ಅವರ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಗುಂಪು ಸಿ ಯಲ್ಲಿರುವ ಈ ತಂಡಗಳ ಹಣಾಹಣಿಯಲ್ಲಿ, ಫಿಫಾ rank ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಅರ್ಜೆಂಟೀನಾಗೆ ಗೆಲುವು ಎಂದು ಅಂದಾಜಿಸಲಾಗಿತ್ತು. ಆದರೆ, ಮೈದಾನದಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ ೫೧ನೇ ಶ್ರೇಯಾಂಕದ ಸೌದಿ ಅರೇಬಿಯಾ, ಬಲಿಷ್ಠ ತಂಡಕ್ಕೆ ಆಘಾತ ಕೊಟ್ಟಿತು.

ಅರ್ಜೆಂಟೀನಾ ತಂಡದ ಪರ ಪಂದ್ಯದ ೧೦ನೇ ನಿಮಿಷದಲ್ಲಿ ನಾಯಕ ಲಿಯೋನೆಲ್‌ ಮೆಸ್ಸಿ ಗೋಲ್‌ ಬಾರಿಸುವ ಮೂಲಕ ಮುನ್ನಡೆ ಕಲ್ಪಿಸಿಕೊಟ್ಟರು. ಈ ಮುನ್ನಡೆ ಪ್ರಥಮಾರ್ಧದ ಮುಕ್ತಾಯದ ತನಕ ಮುಂದುವರಿಯಿತು. ಆದರೆ, ದ್ವಿತೀಯಾರ್ಧದ ಆಟ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಸೌದಿ ಅರೇಬಿಯಾ ತಂಡದ ಸಲೇಹ್‌ ಅಲ್‌ಶೆಹೆರಿ (೪೮ನೇ ನಿಮಿಷ) ಗೋಲ್‌ ಬಾರಿಸುವ ಮೂಲಕ ೧-೧ ಗೋಲ್‌ಗಳ ಸಮಬಲ ಸಾಧಿಸುವಂತೆ ನೋಡಿಕೊಂಡರು. ಅದಾಗಿ ಐದೇ ನಿಮಿಷದಲ್ಲಿ ಸಲೆಮ್‌ ಅಲ್ದಾವ್‌ಸರಿ (೫೩ನೇ ನಿಮಿಷ) ಗೋಲ್‌ ಬಾರಿಸುವ ಮೂಲಕ ಸೌದಿ ಅರೇಬಿಯಾಗೆ ಮುನ್ನಡೆ ಕಲ್ಪಿಸಿಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಕಾಪಾಡಿಕೊಂಡ ಸೌದಿ ಅರೇಬಿಯಾ ಗೆಲುವು ತನ್ನದಾಗಿಸಿಕೊಂಡಿತು.

ಎದುರಾಳಿ ತಂಡ ಮುನ್ನಡೆ ಸಾಧಿಸುತ್ತಿದ್ದಂತೆ ಗಲಿಬಿಲಿಗೊಳಗಾದ ಅರ್ಜೆಂಟೀನಾ ತಂಡ, ಮತ್ತೆರಡು ಗೋಲ್‌ಗಳನ್ನು ಸಾಧಿಸಿ ಗೆಲುವು ಪಡೆಯುವ ಹಲವು ಪ್ರಯತ್ನಗಳನ್ನು ನಡೆಸಿತು. ಆದರೆ, ಸೌದಿ ಅರೇಬಿಯಾದ ಗೋಲ್‌ ಕೀಪರ್‌ ಸೇರಿದಂತೆ ಡಿಫೆಂಡರ್‌ಗಳು ಗೋಲ್‌ ಬಾರಿಸಲು ಅವಕಾಶ ನೀಡಲಿಲ್ಲ.

ಇದನ್ನೂ ಓದಿ | Fifa World Cup | ಇರಾನ್​ ಮೇಲೆ ಗೋಲಿನ ಸುರಿಮಳೆಗೈದ ಇಂಗ್ಲೆಂಡ್​; ವಿಶ್ವ ಕಪ್​ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ

Exit mobile version