ಲಂಡನ್: ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ಯುಗಾಂತ್ಯವಾಯಿತು ಎಂದು ಕ್ರಿಕೆಟ್ ಕಾರಿಡಾರ್‌ನಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಅವರು ಮತ್ತೆ ಮಿಂಚಲು ಆರಂಭಿಸಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಸೇರಿದ ಮೇಲೆ ಈ ಪರಿವರ್ತನೆ ಆರಂಭಗೊಂಡು, ಹಿಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯ ತನಕ ಮುಂದುವರಿದಿದೆ. ಇದೀಗ ಅವರ ಹೆಡ್ ಕೋಚ್ Rahul Dravid ಅವರ ಪ್ರೀತಿಗೂ ಪಾತ್ರರಾಗಿದ್ದು, ಮುಂಬರುವ ಟಿ೨೦ ವಿಶ್ವ ಕಪ್ ಆಡಲಿರುವ ಭಾರತ ತಂಡಕ್ಕೆ ಪ್ರವೇಶ ಪಡೆಯಲು “ಅವಕಾಶದ ಬಾಗಿಲು ತಟ್ಟುತ್ತಿಲ್ಲ, ಜೋರಾಗಿ ಬಡಿಯುತ್ತಿದ್ದಾರೆ,ʼʼ ಎಂಬುದಾಗಿ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯ ಅಬ್ಬರ ಹಾಗೂ ರಿಷಭ್ ಪಂತ್ ಪ್ರವೇಶದಿಂದಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಕಳೆದುಕೊಂಡಿದ್ದ 37 ವರ್ಷದ ದಿನೇಶ್ ಕಾರ್ತಿಕ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಬಹುತೇಕ ಮುಗಿಯಿತು ಎಂದೇ ಹೇಳಲಾಗುತ್ತಿತ್ತು. ಜತೆಗೆ ಐಪಿಎಲ್‌ನ ೨೦೨೧ನೇ ಆವೃತ್ತಿಯಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್ ಪರ ಆಡಿದ್ದ ಅವರು ಪ್ರದರ್ಶನ ವೈಫಲ್ಯವನ್ನೂ ಎದುರಿಸಿದ್ದರು. ಆದರೆ, ೨೦೨೨ನೇ ಆವೃತ್ತಿಯಲ್ಲಿ ಅವರು 5.50 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಸೇರಿದ್ದರು. ಅಲ್ಲಿಂದ ಅವರ ಅದೃಷ್ಟ ಖುಲಾಯಿಸಿತ್ತು. ೧೯೧.೩೩ ಸ್ಟ್ರೈಕ್‌ರೇಟ್‌ನಲ್ಲಿ ೧೪ ಪಂದ್ಯಗಳಲ್ಲಿ ಒಟ್ಟಾರೆ ೨೮೪ ರನ್ ಬಾರಿಸಿದ್ದ ಅವರು ಆರ್‌ಸಿಬಿಯ ಹಲವು ಪಂದ್ಯಗಳ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಈ ಪ್ರದರ್ಶನದ ಕಾರಣಕ್ಕೆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ಆಯ್ಕೆಯಾಗಿದ್ದರು.
ಸರಣಿಯಲ್ಲೂ ಮಿಂಚು
ದಕ್ಷಿಣ ಆಫ್ರಿಕಾ ವಿರುದ್ದದ ಟಿ೨೦ ಸರಣಿಯಲ್ಲೂ ದಿನೇಶ್ ಕಾರ್ತಿಕ್ ಮಿಂಚಿದ್ದರು. ೧೫೮.೬ ಸ್ಟ್ರೈಕ್‌ರೇಟ್‌ನಲ್ಲಿ ೯೨ ರನ್ ಬಾರಿಸಿ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ್ದರು. ಅಲ್ಲದೆ ವಿಶಾಖಪಟ್ಟಣಮ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ೨೭ ಎಸೆತಗಳಲ್ಲಿ ೫೫ ರನ್ ಬಾರಿಸುವ ಮೂಲಕ ಭಾರತ ತಂಡ ಎದುರಾಳಿಗೆ ೧೭೦ ರನ್‌ಗಳು ಗುರಿಯನ್ನೊಡ್ಡಲು ನೆರವಾಗಿದ್ದರು. ಈ ಪಂದ್ಯದಲ್ಲಿ ಭಾರತ 82 ರನ್‌ಗಳ ಬೃಹತ್ ಜಯ ದಾಖಲಿಸಿತ್ತು. ಈ ಪಂದ್ಯದ ಗೆಲುವಿನ ರೂವಾರಿ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.
ಜೋರಾಗಿ ಬಾಗಿಲು ತಟ್ಟುತ್ತಿದ್ದಾರೆ…
ಸರಣಿ ಮುಕ್ತಾಯದ ಹಿನ್ನೆಲೆಯಲ್ಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಆಟಗಾರರ ಪ್ರದರ್ಶನ ಹಾಗೂ ಅವರಿಗೆ ಇರುವ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ದಿನೇಶ್ ಕಾರ್ತಿಕ್ ಅವರನ್ನೂ ಹೊಗಳಿದ್ದಾರೆ. “ದಿನೇಶ್ ಕಾರ್ತಿಕ್ ಕೊನೇ ಐದು ಓವರ್‌ಗಳಲ್ಲಿ ದೊಡ್ಡ ಮೊತ್ತ ಬಾರಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರಿಗೆ ಕೊಟ್ಟಿರುವ ಸ್ಥಾನವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ಮೂಲಕ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಅವಕಾಶಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಮುಂದಿನ ವಿಶ್ವ ಕಪ್ ಆಡಲಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯವುದಕ್ಕಾಗಿ ಬಾಗಿಲು ತಟ್ಟುತ್ತಿಲ್ಲ, ಬಾಗಿಲನ್ನು ಜೋರಾಗಿ ಬಡಿಯುತ್ತಿದ್ದಾರೆ,ʼʼ ಎಂದು ಹೇಳಿದ್ದಾರೆ.
ಇದೇ ವೇಳೆ ದ್ರಾವಿಡ್ ಅವರು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹೊಣೆಗಾರಿಕೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊನೇ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ| Ind vs Sa T20 | ಭಾರತ ಗೆದ್ದ ರೋಚಕ ಪಂದ್ಯದಲ್ಲಿ ಮಿಂಚಿದ ದಿನೇಶ್ ಕಾರ್ತಿಕ್