Site icon Vistara News

Anand Mahindra: ಸರ್ಫರಾಜ್ ಖಾನ್ ತಂದೆಗೆ ಥಾರ್ ಎಸ್‌ಯುವಿ ಗಿಫ್ಟ್​ ಕೊಟ್ಟ ಮಹೀಂದ್ರಾ

Naushad Khan

Naushad Khan

ಮುಂಬಯಿ: ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಕ್ರೀಡಾ ಕ್ಷೇತ್ರದಲ್ಲಿ ಯಾರಾದರು ಸಾಧನೆ ಮಾಡಿದ ತಕ್ಷಣ ಅವರಿಗೆ ಉಡುಗೊರೆ ಮತ್ತು ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಇದೀಗ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯವನ್ನಾಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸರ್ಫರಾಜ್​ ಖಾನ್​ ಅವರ ತಂದೆ ನೌಶಾದ್ ಖಾನ್(Naushad Khan)ಗೆ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸರ್ಫರಾಜ್ ಖಾನ್ ಭಾರತ ತಂಡದ ಟೆಸ್ಟ್​ ಕ್ಯಾಪ್​ ಪಡೆಯುತ್ತಿದ್ದಂತೆ ನೌಶಾದ್ ಖಾನ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ಬಡ ಕುಟುಂಬದಿಂದ ಬಂದು ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆಯ ಪರಿಶ್ರಮಕ್ಕೆ ಮೆಚ್ಚುಗೆಯಾಗಿ ಆನಂದ್ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ IND vs ENG 3rd Test: ಬೆನ್‌ ಡಕೆಟ್‌ ಬಿರುಸಿನ ಶತಕ; ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್​

“ಕಠಿಣ ಪರಿಶ್ರಮ, ಶೌರ್ಯ, ತಾಳ್ಮೆ ಮಗುವಿನಲ್ಲಿ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣ ಯಾವುದು?. ಸ್ಪೂರ್ತಿದಾಯಕ ಪೋಷಕರಾಗಿರುವುದರಿಂದ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ ಅದು ನನಗೆ ಸಂತೋಷ ಮತ್ತು ಗೌರವ” ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.

ಮೂರನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸರ್ಫರಾಜ್​ ಖಾನ್​ ಅವರು ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅರ್ಧಶತಕ ಬಾರಿಸಿದರು. ರವೀಂದ್ರ ಜಡೇಜಾ ಅವರ ತಪ್ಪಿನಿಂದಾಗಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲವಾದಲ್ಲಿ ಅವರು ಶತಕ ಬಾರಿಸುವ ಸಾಧ್ಯತೆ ಇತ್ತು. ಒಟ್ಟು 66 ಎಸೆತ ಎದುರಿಸಿ 1 ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ 62 ರನ್​ ಗಳಿಸಿದ್ದರು. ದ್ವಿತೀಯ ಇನಿಂಗ್ಸ್​ನಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಭಾರಿ ನಿರೀಕ್ಷೆ ಇರಿಸಲಾಗಿದೆ.

22 ವರ್ಷದ ಸರ್ಫರಾಜ್ 45 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 3912 ರನ್​ ಬಾರಿಸಿದ್ದಾರೆ. ಇದರಲ್ಲಿ 14 ಶತಕ ಮತ್ತು 11 ಅರ್ಧಶತಕ ಒಳಗೊಂಡಿದೆ. ಅಜೇಯ 301 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

Exit mobile version