Site icon Vistara News

Hanuma Vihari: ಎಸಿಎ ಆರೋಪಕ್ಕೆ ತಿರುಗೇಟು ನೀಡಿದ ಹನುಮ ವಿಹಾರಿ

Hanuma Vihari

ಹೈದರಾಬಾದ್: ಟೀಮ್​ ಇಂಡಿಯಾದ ಆಟಗಾರ ಹನುಮ ವಿಹಾರಿ(Hanuma Vihari) ಮತ್ತು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್(Andhra Cricket Association) ನಡುವಣ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಹ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆಂದು ಆಂಧ್ರ ಕ್ರಿಕೆಟ್‌ ಮಂಡಳಿ(ACA) ಮಾಡಿದ ಆರೋಪವನ್ನು ವಿಹಾರಿ ತಳ್ಳಿ ಹಾಕಿದ್ದಾರೆ.

2 ದಿನಗಳ ಹಿಂದೆ ಹನುಮ ವಿಹಾರಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿ, ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆ ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್​ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದ ಹೊರತಾಗಿಯೂ ರಾಜೀನಾಮೆ ಕೊಡಲು ನನ್ನಲ್ಲಿ ಅಸೋಸಿಯೇಶನ್​ ಕೇಳಿಕೊಂಡಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್​ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ, ಆದರೆ ನಾನು ಆಟ ಮತ್ತು ನನ್ನ ತಂಡವನ್ನು ಗೌರವಿಸುವ ಏಕೈಕ ಕಾರಣದಿಂದ ಈ ಋತುವಿನಲ್ಲಿ ಆಟವಾಡುವುದನ್ನು ಮುಂದುವರೆಸಿದೆ ಎಂದು ವಿಹಾರಿ ಬರೆದುಕೊಂಡಿದ್ದರು.

ವಿಹಾರಿ ಮಾಡಿದ ಆರೋಪಗಳ ಬಗ್ಗೆ ಎಸಿಎ ತನಿಖೆ ನಡೆಸುವುದಾಗಿ ತಿಳಿಸಿತ್ತು. ವಿಹಾರಿ ನಾಯಕತ್ವದ ನಿರ್ಗಮನವು ವೃತ್ತಿಪರ ಪರಿಗಣನೆಯ ಪರಿಣಾಮವಾಗಿದೆಯೇ ಹೊರತು ರಾಜಕೀಯ ಹಸ್ತಕ್ಷೇಪವಲ್ಲ ಎಂದು ಹೇಳಿತ್ತು. ಜತೆಗೆ ಹನುಮ ವಿಹಾರಿಯ ದುರ್ವತನೆಯ ನಡೆಯನ್ನು ಉಲ್ಲೇಖಿಸಿ ವಿವಿಧ ವಲಯಗಳಿಂದ ದೂರುಗಳನ್ನು ಸ್ವೀಕರಿಸಿದ್ದೇವೆ. ಹೀಗಾಗಿ ನಾಯಕತ್ವದಿಂದ ಅವರನ್ನು ಕೆಳಗಿಳಿಸಲಾಗಿದೆ. ವಿಹಾರಿ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪ ಮಾಡಿತ್ತು.

ಇದನ್ನೂ ಓದಿ BCCI: ದೇಶಿ ಕ್ರಿಕೆಟ್​ ಕಡೆಗಣಿಸುತ್ತಿರುವ ಆಟಗಾರರಿಗೆ ಲಾಸ್ಟ್​ ವಾರ್ನಿಂಗ್​ ನೀಡಿದ ಬಿಸಿಸಿಐ!

ಆಂಧ್ರ ಕ್ರಿಕೆಟ್ ಸಂಸ್ಥೆ ಮಾಡಿದ ಆರೋಪಕ್ಕೆ ಇದೀಗ ಮತ್ತೆ ಪ್ರತಿಕ್ರಿಯೆ ನೀಡಿರುವ ವಿಹಾರಿ, “ತಂಡದಲ್ಲಿ ನಾನು ನಾಯಕ ಹಾಗೂ ಆಟಗಾರನಾಗಿ ಮುಂದುವರಿಯಬೇಕೆಂದು ಎಲ್ಲ 15 ಆಟಗಾರರ ಒಪ್ಪಿಗೆ ಪಡೆಯುವ ಮೂಲಕವೇ ಪತ್ರವನ್ನು ಬರೆದಿದ್ದೇನೆ. ನಾಯಕನಾಗಿ ನನ್ನನ್ನು ತಂಡದ ಎಲ್ಲಾ ಆಟಗಾರರು ನಂಬಿದ್ದಾರೆ. ಕಳೆದ 24 ಗಂಟೆಗಳನ್ನು ನನಗೆ ಸಿಕ್ಕ ಬೆಂಬಲಕ್ಕೆ ಧನ್ಯವಾದವನ್ನು ಅರ್ಪಿಸಲು ಬಯಸುತ್ತೇನೆ. ಸತ್ಯ ಜಗತ್ತಿಗೆ ತಿಳಿಯ ಬೇಕು ಹೆದರು ಕುಳಿತುಕೊಳ್ಳುವ ಕಾಲ ಇದಲ್ಲ” ಎಂದು ಹನುಮ ವಿಹಾರಿ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ಗೆ ತಿರುಗೇಟು ನೀಡಿದ್ದಾರೆ.

Exit mobile version