Site icon Vistara News

Andre Russell: ಆರ್​ಸಿಬಿ ವಿರುದ್ಧ 2 ವಿಕೆಟ್​ ಕಿತ್ತು ದಾಖಲೆ ಬರೆದ ಆ್ಯಂಡ್ರೆ ರಸೆಲ್​

Andre Russell

ಬೆಂಗಳೂರು: ಕೋಲ್ಕತ್ತಾ ನೈಟ್​​ ರೈಡರ್ಸ್(Kolkata Knight Riders)​ ತಂಡದ ಆಲ್​ರೌಂಡರ್​ ಆ್ಯಂಡ್ರೆ ರಸೆಲ್(Andre Russell)​ ಅವರು ನಿನ್ನೆ(ಶುಕ್ರವಾರ) ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ(IPL 2024) ನೂತನ ದಾಖಲೆ ಬರೆದಿದ್ದಾರೆ. ಐಪಿಎಲ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿ 2000 ರನ್ಸ್ + 100 ವಿಕೆಟ್ ಪಡೆದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆಯನ್ನು ರಸೆಲ್ ತಮ್ಮದಾಗಿಸಿಕೊಂಡಿದ್ದಾರೆ. ಜತೆಗೆ ಈ ಸಾಧನೆ ಮಾಡಿದ 2ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಚಿನ್ನಸ್ವಾಮಿಯಲ್ಲಿ ನಡೆದ ಈ ಪಂದ್ಯದಲ್ಲಿ ರಸೆಲ್​ 4 ಓವರ್​ ಎಸೆದು 29 ರನ್​ ವೆಚ್ಚದಲ್ಲಿ 2 ವಿಕೆಟ್​ ಪಡೆದರು. ಇವರ ಸ್ಲೋ ಎಸೆತಕ್ಕೆ ವಿರಾಟ್​ ಕೊಹ್ಲಿ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ರನ್​ ಗಳಿಸಲು ಸಂಪೂರ್ಣವಾಗಿ ಪರದಾಟ ನಡೆಸಿದರು. ಆದರೆ ದಿನೇಶ್​ ಕಾರ್ತಿಕ್​ ಮಾತ್ರ ಸಮರ್ಥವಾಗಿ ಇವರ ಎಸೆತಗಳನ್ನು ಎದುರಿಸಿ ಅಂತಿಮ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಮಿಂಚಿದರು.

ಐಪಿಎಲ್​ನಲ್ಲಿ 2 ಸಾವಿರ ಪ್ಲಸ್​ ರನ್​ ಮತ್ತು ಅತ್ಯಧಿಕ ವಿಕೆಟ್​ ಕಿತ್ತ ದಾಖಲೆ ರವೀಂದ್ರ ಜಡೇಜಾ ಹರಸರಿನಲ್ಲಿದೆ. ಜಡೇಜಾ ಇದುವರೆಗೆ 228 ಪಂದ್ಯಗಳನ್ನಾಡಿ 2724 ರನ್​ ಮತ್ತು 152 ವಿಕೆಟ್​ ಪಡೆದಿದ್ದಾರೆ.

ಹೀನಾಯ ಸೋಲು ಕಂಡ ಆರ್​ಸಿಬಿ


ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಬ್ಯಾಟಿಂಗ್​ಗೆ ನೆರವು ನೀಡುವ ಪಿಚ್​ನಲ್ಲಿ ಕುಂಟುತ್ತಾ ರನ್ ಪೇರಿಸಿ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 182 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ನೈಟ್​ರೈಡರ್ಸ್​ ಬಳಗ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ. ಇನ್ನೂ 19 ಎಸೆತಗಳ ಬಾಕಿ ಇರುವಂತೆಯೇ 3 ವಿಕೆಟ್​ಗೆ 186 ರನ್ ಬಾರಿಸಿ ಗೆಲುವು ಸಾಧಿಸಿತು. ದುರ್ಬಲ ಬೌಲಿಂಗ್ ಹಾಗೂ ನಿಯಂತ್ರಣವಿಲ್ಲ ಬ್ಯಾಟಿಂಗ್ ಹಾಗೂ ಕಳಪೆ ಫೀಲ್ಡಿಂಗ್​ಗೆ ಬೆಲೆ ತೆತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) 7 ವಿಕೆಟ್​ಗಳ ಹೀನಾಯ ಸೋಲಿಗೆ ತುತ್ತಾಯಿತು.

ಇದನ್ನೂ ಓದಿ IPL 2024 Points Table: ಆರ್​ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದ ಕೆಕೆಆರ್​

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್​ ಅಬ್ಬರಿಸಿ ಬೊಬ್ಬಿರಿಯಿತು. ಆರ್​ಸಿಬಿ ಬೌಲರ್​ಗಳ ಲಯ ತಪ್ಪಿದ ಬೌಲಿಂಗ್​ಗೆ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಫಿಲ್​ ಸಾಲ್ಟ್​ 20 ಎಸೆತಕ್ಕೆ 30 ರನ್ ಬಾರಿಸಿದರೆ, ಸುನೀಲ್​ ನರೈನ್​ 22 ಎಸೆತಕ್ಕೆ 47 ರನ್ ಚಚ್ಚಿದರು. ಇವರ ಇನಿಂಗ್ಸ್​ನಲ್ಲಿ 2 ಫೋರ್ ಹಾಗೂ 5 ಸಿಕ್ಸರ್​ಗಳು ಇದ್ದವು. ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲಿ 18 ರನ್ ಬಿಟ್ಟು ಕೊಟ್ಟು ಸೋಲಿಗೆ ಮುನ್ನುಡಿ ಬರೆದರು. ಯಶ್​ ದಯಾಳ್​, ಅಲ್ಜಾರಿ ಜೋಸೆಫ್​ ಕೂಡ ದುಬಾರಿ ಎನಿಸಿಕೊಂಡರು. ಬಳಿಕ ವೆಂಕಟೇಶ್​ ಅಯ್ಯರ್​ 50 ರನ್ ಬಾರಿಸಿದರೆ ನಾಯಕ ಶ್ರೇಯಸ್ ಅಯ್ಯರ್ ​39 ರನ್ ಬಾರಿಸಿ ಅಜೇಯರಾಗಿ ಉಳಿದರು.

Exit mobile version