ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ಬಿಬಿಸಿಯ ಚಿತ್ರೀಕರಣದ ವೇಳೆ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದು ಅವರನ್ನು ತಕ್ಷಣವೇ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಬಿಸಿ ನಡೆಸಿಕೊಡುವ “ಟಾಪ್ ಗೇರ್” ಎನ್ನುವ ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಆದರೆ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಪಘಾತದಿಂದ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಬಿಬಿಸಿ ತನ್ನ ಹೇಳಿಕೆಯಲ್ಲಿ ಧೃಡಪಡಿಸಿದೆ.
ಕಾರು ಅಪಘಾತದಲ್ಲಿ ಗಾಯಗೊಂಡ ಫ್ಲಿಂಟಾಫ್ಗೆ ತಕ್ಷಣವೇ ಸೆಟ್‌ನಲ್ಲಿದ್ದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿತು. ಬಳಿಕ ಅವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶೀಘ್ರದಲ್ಲೇ ಅವರ ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ ಎಂದು ಬಿಬಿಸಿ ಹೇಳಿಕೊಂಡಿದೆ.
ಫ್ಲಿಂಟಾಫ್ ಕಾರು ಅಪಘಾತದಲ್ಲಿ ಗಾಯಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019ರಲ್ಲಿ ಇಂತಹ ಅಪಘಾತಕ್ಕೆ ಫ್ಲಿಂಟಾಫ್ ತುತ್ತಾಗಿದ್ದರು. ತನ್ನ ಕಾರನ್ನು ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣವನ್ನು ಕಳೆದುಕೊಂಡಿದ್ದ ಫ್ಲಿಂಟಾಫ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಇದೀಗ ಎರಡನೇ ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅವಕಾಶ!