Site icon Vistara News

Annabel Sutherland: ವೇಗದ ದ್ವಿಶತಕ ಬಾರಿಸಿ ದಾಖಲೆ ಬರೆದ ಅನಾಬೆಲ್ ಸುದರ್ಲ್ಯಾಂಡ್

Annabel Sutherland

ಪರ್ತ್: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಯುವ ಆಟಗಾರ್ತಿ ಅನಾಬೆಲ್ ಸುದರ್ಲ್ಯಾಂಡ್(Annabel Sutherland) ಮಹಿಳೆಯರ ಟೆಸ್ಟ್ ಕ್ರಿಕೆಟ್(women’s Test cricket) ಇತಿಹಾಸದಲ್ಲಿ ಅತ್ಯಂತ ವೇಗದ ದ್ವಿಶತಕವನ್ನು ಬಾರಿಸಿದ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ(Australia Women vs South Africa Women) ಏಕೈಕ ಟೆಸ್ಟ್​ನಲ್ಲಿ ಅವರು ಈ ಸಾಧನೆ ಮಾಡಿದರು.

22 ವರ್ಷದ ಸುದರ್ಲ್ಯಾಂಡ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿ 248 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ತಿಗೊಳಿಸಿದರು. ಈ ವೇಳೆ ಅತ್ಯಂತ ವೇಗದ ದ್ವಿಶತಕ ದಾಖಲಿಸಿದ ಸಾಧನೆ ಮಾಡಿದರು. ಇದಕ್ಕೂ ಮೊದಲು, ಈ ದಾಖಲೆಯು ಆಸ್ಟ್ರೇಲಿಯದವರೇ ಆಗಿರುವ ಕ್ಯಾರನ್ ರೋಲ್ಟನ್ ಅವರ ಹೆಸರಿನಲ್ಲಿತ್ತು. ಅವರು 2001ರಲ್ಲಿ ಇಂಗ್ಲೆಂಡ್ ವಿರುದ್ಧ 306 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. ಇದೀಗ 21 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿದೆ.

ಈ ಪಂದ್ಯದಲ್ಲಿ ಒಟ್ಟು 256 ಎಸೆತ ಎದುರಿಸಿದ ಸುದರ್ಲ್ಯಾಂಡ್ 210 ರನ್​ ಗಳಿಸಿ ನಿರ್ಗಮಿಸಿದರು. 4 ರನ್ ಬಾರಿಸುತ್ತಿದ್ದರೆ ಟೆಸ್ಟ್​ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ತನ್ನದೆ ದೇಶದ ಎಲ್ಲಿಸ್ ಪೆರ್ರಿ ದಾಖಲೆಯನ್ನು ಹಿಂದಿಕ್ಕಿ ಭಾರತದ ಮಾಜಿ ಆಟಗಾರ್ತಿ ಮಿಥಾಲಿ ರಾಜ್​ ದಾಖಲೆಯನ್ನು ಸರಿಗಟ್ಟಬಹುದಿತ್ತು. ಎಲ್ಲಿಸ್ ಪೆರ್ರಿ 2017ರಲ್ಲಿ 213 ರನ್‌ ಗಳನ್ನು ಗಳಿಸಿದ್ದರು.

ಇದನ್ನೂ ಓದಿ Yuvraj Singh: ಯುವರಾಜ್ ಸಿಂಗ್ ಮನೆಯಿಂದ ನಗದು, ಚಿನ್ನಾಭರಣ ಕಳವು; ದೂರು ದಾಖಲಿಸಿದ ತಾಯಿ

ಸುದರ್ಲ್ಯಾಂಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನಿಂಗ್ಸ್​ನಲ್ಲಿ 9 ವಿಕೆಟ್‌ ಗಳ ನಷ್ಟಕ್ಕೆ 575 ರನ್‌ ಗಳಿಗೆ ಡಿಕ್ಲೇರ್ ಮಾಡಿತು. ಇದು ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಮೊದಲ ಇನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ 76 ರನ್​ಗೆ ಸರ್ವಪತನ ಕಂಡು ಇನಿಂಗ್ಸ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ್ದು 4 ವಿಕೆಟ್​ ಕಳೆದುಕೊಂಡು ಸೋಲು ಖಚಿತಪಡಿಸಿದೆ.

ಮಹಿಳಾ ಟೆಸ್ಟ್​ನಲ್ಲಿ ಗರಿಷ್ಠ ವೈಯಕ್ತಿಕ ರನ್​ ಗಳಿಸಿದ ಆಟಗಾರ್ತಿಯರು


1. ಕಿರಣ್ ಬಲೂಚ್ (ಪಾಕಿಸ್ತಾನ)-242 ರನ್,​ ವೆಸ್ಟ್ ಇಂಡೀಸ್ ವಿರುದ್ಧ (2004)

2. ಮಿಥಾಲಿ ರಾಜ್​(ಭಾರತ)-214 ರನ್​, ಇಂಗ್ಲೆಂಡ್​ ವಿರುದ್ಧ (2002)

3. ಎಲ್ಲಿಸ್ ಪೆರ್ರಿ(ಆಸ್ಟ್ರೇಲಿಯಾ)- 213*ರನ್​, ಇಂಗ್ಲೆಂಡ್​ ವಿರುದ್ಧ (2017)

4. ಅನಾಬೆಲ್ ಸುದರ್ಲ್ಯಾಂಡ್(ಆಸ್ಟ್ರೇಲಿಯಾ)-210 ರನ್​, ದಕ್ಷಿಣ ಆಫ್ರಿಕಾ ವಿರುದ್ಧ (2024)

5.ಕ್ಯಾರನ್ ರೋಲ್ಟನ್(ಆಸ್ಟ್ರೇಲಿಯಾ)-209 ರನ್​, ಇಂಗ್ಲೆಂಡ್​ ವಿರುದ್ಧ (2001)

Exit mobile version