Site icon Vistara News

IND vs ENG: ವೀಸಾ ವಿವಾದಕ್ಕೆ ಸಿಲುಕಿದ ಇಂಗ್ಲೆಂಡ್ ಆಟಗಾರ; ಸರಿಪಡಿಸಲು 24 ಗಂಟೆ ಕಾಲಾವಕಾಶ

rehan ahmed

ರಾಜ್​ಕೋಟ್​​: ಅಬುಧಾಬಿಗೆ ತೆರಳಿ ಒಂದು ವಾರ ವಿಶ್ರಾಂತಿ ‍‍ಪಡೆದಿದ್ದ ಇಂಗ್ಲೆಂಡ್(IND vs ENG) ಕ್ರಿಕೆಟ್ ತಂಡ ಮೂರನೇ ಟೆಸ್ಟ್​ ಪಂದ್ಯವನ್ನಾಡಲು ರಾಜ್​ಕೋಟ್(Rajkot)​ಗೆ ಬಂದಿಳಿದಿದ್ದಾರೆ. ಆದರೆ ತಂಡದ ಸ್ಪಿನ್ನರ್​ ರೆಹಾನ್ ಅಹ್ಮದ್​(England spinner Rehan Ahmed) ದೇಶಕ್ಕೆ ಪ್ರವೇಶಿಸಲು ಬೇಕಾದ ಸರಿಯಾದ ದಾಖಲೆಗಳನ್ನು ಕೊಂಡೊಯ್ಯದ(Visa Controversy Strikes) ಕಾರಣ ರಾಜ್‌ಕೋಟ್‌ನ ಹಿರಾಸರ್ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ತಂಡದ ಪಾಕಿಸ್ತಾನ ಮೂಲದ ರೆಹಾನ್ ಅಹ್ಮದ್(Rehan Ahmed) ಸಿಂಗಲ್ ಎಂಟ್ರಿ ವೀಸಾವನ್ನು ಹೊಂದಿದ್ದರು, ಇದರಿಂದಾಗಿ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸುದೀರ್ಘ ವಿಚಾರಣೆಯ ಬಳಿಕ ರೆಹಾನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಹೋಟೆಲ್‌ಗೆ ಹೋಗಲು ಅನುಮತಿ ನೀಡಲಾಗಿದ್ದರೂ ಕೂಡ ಮುಂದಿನ 24 ಗಂಟೆಯೊಳಗಡೆ ವೀಸಾ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

ಭಾರತ ಪ್ರವಾಸದ ವೇಳೆ ಇಂಗ್ಲೆಂಡ್ ತಂಡದ ವೀಸಾಗೆ ಸಂಬಂಧಿಸಿದ ಎರಡನೇ ಪ್ರಕರಣ ಇದಾಗಿದೆ. ಭಾರತ ಪ್ರವಾಸಕ್ಕೂ ಮುನ್ನ ಪಾಕಿಸ್ತಾನ ಮೂಲದ ಇಂಗ್ಲೆಂಡ್‌ ತಂಡದ ಸ್ಪಿನ್ನರ್​ ಶೋಯಿಬ್‌ ಬಶೀರ್‌(Shoaib Bashir) ಕೂಡ ವೀಸಾ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್​ಗೆ ಅಲಭ್ಯರಾಗಿದ್ದರು. ಇದೇ ವಿಚಾರದಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ IND vs ENG: ಅಬುಧಾಬಿಯಿಂದ ರಾಜ್​ಕೋಟ್​ಗೆ ಬಂದಿಳಿದ ಇಂಗ್ಲೆಂಡ್​ ತಂಡ; ಇಂದಿನಿಂದ ಅಭ್ಯಾಸ

‘ಭಾರತದ ವೀಸಾ ಪ್ರಕ್ರಿಯೆಯಲ್ಲಿ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ. ನಾವು ಈ ಪ್ರಕರಣದ ನಿರ್ದಿಷ್ಟತೆಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆದರೆ ನಾವು ಈ ರೀತಿಯ ಸಮಸ್ಯೆಗಳನ್ನು ಈ ಹಿಂದೆಯೇ ಹೈಕಮಿಷನ್‌ ಮುಂದಿಟ್ಟಿದ್ದೇವೆ. ಭಾರತವು ತನ್ನ ವೀಸಾ ಪ್ರಕ್ರಿಯೆಗಳಲ್ಲಿ ಎಲ್ಲ ಸಮಯದಲ್ಲೂ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಭಾರತದ ವೀಸಾ ಪಡೆಯುವ ವೇಳೆ ಪಾಕಿಸ್ತಾನಿ ಮೂಲದ ಬ್ರಿಟಿಷ್ ನಾಗರಿಕರು ಅನುಭವಿಸಿದ ಸಮಸ್ಯೆಗಳನ್ನು ನಾವು ಈ ಹಿಂದೆಯೇ ಪ್ರಸ್ತಾಪಿಸಿದ್ದೇವೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಬಳಿ ವೀಸಾಗಳಿಗೆ ಅರ್ಜಿ ಸಲ್ಲಿಸಿದ ಅನುಭವದ ಬಗ್ಗೆ ನಾವು ಸಮಸ್ಯೆಗಳನ್ನು ಎತ್ತಿದ್ದೇವೆ ಎಂದು ರಿಷಿ ಸುನಕ್ ವಕ್ತಾರರು ವೀಸಾ ವಿಳಂಬದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ರಿಷಿ ಸುನಕ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಶೋಯಿಬ್‌ ಬಶೀರ್​ಗೆ ವೀಸಾ ಲಭಿಸಿತ್ತು. ದ್ವಿತೀಯ ಪಂದ್ಯದ ವಳೆ ಅವರು ಭಾರತಕ್ಕೆ ಬಂದಿದ್ದರು. ಇದೀಗ ರೆಹಾನ್ ಅಹ್ಮದ್​ ಕೂಡ ವೀಸಾ ಸಮಸ್ಯೆಗೆ ಸಿಲುಕಿದ್ದಾರೆ. ತಮ್ಮ ದಾಖಲೆಗಳನ್ನು ಸರಿಪಡಿಸಲು ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಇದೇ ಗುರುವಾರ ರಾಜ್​ಕೋಟ್​ನಲ್ಲಿ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಈ ಕೆಲಸ ಮಾಡಬೇಕಿದೆ. ಒಂದೊಮ್ಮೆ ವೀಸಾ ಸಮಸ್ಯೆ ಬಹೆಗರಿಯದಿದ್ದಲ್ಲಿ ಅವರು ಮರಳಿ ಲಂಡನ್​ಗೆ ತೆರಳಬೇಕಾಗಿದೆ.

ಮೊಣಕಾಲು ಗಾಯಕ್ಕೆ ತುತ್ತಾದ ಜಾಕ್​ ಲೀಚ್​ ಅವರು ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಲೀಚ್‌ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನನ್ನು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಆಯ್ಕೆ ಮಾಡಿಲ್ಲ. ಇದೀಗ ರೆಹಾನ್ ಅಹ್ಮದ್ ಕೂಡ ವೀಸಾ ಸಮಸ್ಯೆ ಬಗೆಹರಿಸದಿದ್ದರೆ ಅವರು ಕೂಡ ಅಲಭ್ಯರಾಗಲಿದ್ದಾರೆ. ಆಗ ಇಂಗ್ಲೆಂಡ್​ ಸಂಕಷ್ಟಕ್ಕೆ ಸಿಲುಕಲಿದೆ.

ಇಂಗ್ಲೆಂಡ್ ಟೆಸ್ಟ್ ತಂಡ


ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್, ಓಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗಸ್ ಅಟ್ಕಿನ್ಸನ್.

Exit mobile version