ಪ್ಯಾರಿಸ್: ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದಲ್ಲಿ(olympic village) ತಮ್ಮ ಗುರುತಿನ ಕಾರ್ಡ್ ದುರ್ಬಳಕೆ ಮಾಡಿದ ಆರೋಪದಡಿ ಕುಸ್ತಿಪಟು(Wrestler Antim Panghal) ಅಂತಿಮ್ ಪಂಘಲ್(Antim Panghal) ಅವರನ್ನು ಮೂರು ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ವಿಚಾರದಲ್ಲಿ ಇದೀಗ ಸ್ವತಃ ಐಒಎ (ಭಾರತೀಯ ಒಲಿಂಪಿಕ್ಸ್ ಸಂಸ್ಥೆ) ಸ್ಪಷ್ಟನೆ ನೀಡಿದೆ. ಪಂಘಲ್ ಅವರನ್ನು 3 ವರ್ಷ ಸ್ಪರ್ಧೆಗಳಿಂದ ನಿಷೇಧಿಸುವ ಯಾವುದೇ ಉದ್ದೇಶ ನಮ್ಮ ಮುಂದಿಲ್ಲ ಎಂದು ಹೇಳಿದೆ.
ಬುಧವಾರ ತಮ್ಮ ಸಾಮಾಗ್ರಿಯನ್ನು ತರಲು, ಅಂತಿಮ್ ತಮ್ಮ ಐಡಿ ಕಾರ್ಡ್‌ನ್ನು ಸಹೋದರಿ ನಿಶಾ ಪಂಘಲ್‌ಗೆ ನೀಡಿದ್ದರು. ಆಕೆ ಅಂತಿಮ್ ಐಡಿ ಕಾರ್ಡ್ ಬಳಸಿ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಿ, ಹಿಂದಿರುಗುವಾಗ ಸೆಕ್ಯುರಿಟಿ ಕೈಗೆ ಸಿಕ್ಕಿಬಿದ್ದಿದ್ದರು. ಕೂಡಲೇ ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಪೊಲೀಸರು ಹೇಳಿಕೆ ದಾಖಲಿಸಿದ ಬಳಿಕ ಬಿಡುಗಡೆ ಮಾಡಲಾಗಿತ್ತು. ಅಶಿಸ್ತಿನ ಕಾರಣದಿಂದಾಗಿ ಅಂತಿಮ್ ಪಂಘಲ್ ಅವರನ್ನು ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು, ಜತೆಗೆ ಈ ತಪ್ಪು ಮಾಡಿದ ಕಾರಣಕ್ಕೆ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮೂರು ವರ್ಷಗಳ ನಿಷೇಧ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು. ಇದೀಗ ಅವರನ್ನು ನಿಷೇಧ ಮಾಡುವುದಿಲ್ಲ ಎಂದು ಐಒಎ ತಿಳಿಸಿದೆ.
ಸಹೋದರಿ ಕ್ರೀಡಾಗ್ರಾಮ ಪ್ರವೇಶಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದ ಅಂತಿಮ್ ಪಂಘಲ್, ‘ಗೊಂದಲದಿಂದ ಹೀಗಾಗಿದೆ. ಇದು ಉದ್ದೇಶ ಪೂರ್ವಕ ತಪ್ಪಲ್ಲ. ನನ್ನ ಕಾರ್ಡ್ ಪಡೆದಿದ್ದ ಸಹೋದರಿ ಕ್ರೀಡಾ ಗ್ರಾಮಕ್ಕೆ ತೆರಳಿ, ಒಳ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಜತೆ ಅನುಮತಿಯನ್ನು ಕೇಳಿದ್ದಾಳೆ. ಕಾರ್ಡ್ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದಿದ್ದರು.
ಅಂತಿಮ್ ಪಂಘಲ್ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದ್ದರು. 2022ರ ವಿಶ್ವ ಕಿರಿಯರ ಚಾಂಪಿಯನ್ ಅಂತಿಮ್ ಅವರು ಬುಧವಾರ ನಡೆದಿದ್ದ ಮಹಿಳೆಯರ 53 ಕೆ.ಜಿ. ವಿಭಾಗದ ಪಂದ್ಯದಲ್ಲಿ ಟರ್ಕಿಯ ಯೆಟ್ಗಿಲ್ ಝೈನೆಬ್ ವಿರುದ್ಧ 0-10 ಅಂಕಗಳಿಂದ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಅಂತಿಮ್ ಪಂಘಲ್ ಅವರು ಶುಕ್ರವಾರ ಬೆಳಗ್ಗೆ ನವದೆಹಲಿಗೆ ಆಗಮಿಸಿದ್ದಾರೆ.
ಇಂದಿನ ವೇಳಾಪಟ್ಟಿ
ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.
ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.
ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.
ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.
ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.